ಬೆಂಗಳೂರು: ಐಟಿ ಸಂಸ್ಥೆ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಬೆಳವಣಿಗೆ ದೇಶ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಕಾಂಗ್ರೆಸ್ನವರಲ್ಲಿ ಹಣ ಇದ್ದರೆ ದಾಳಿ ಮಾಡಬೇಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಂವಿಧಾನ ಹಾಗೂ ಕಾನೂನು ತನ್ನ ಅಸ್ತಿತ್ವ ಉಳಿಸಿಕೊಂಡು ಕ್ರಮ ಜರುಗಿಸಿದರೆ ದೇಶಕ್ಕೆ ಒಳ್ಳೆಯದು. ಆದರೆ ಅದು ಆಗುತ್ತಿಲ್ಲ ಎಂದು ಕಿಡಿಕಾರಿದರು. ಅಲ್ಲದೆ, ಈ ರೀತಿ ಸ್ವಾಯತ್ತ ಸಂಸ್ಥೆಗಳನ್ನು ಪಕ್ಷಗಳು ಬಳಸಿಕೊಳ್ಳುವ ರೀತಿಯಿಂದ ಅವುಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತವೆ ಎಂದರು.
ನೆಗಡಿ ಎಂದು ಮೂಗೇ ಕತ್ತರಿಸಿದರೆ ಹೇಗೆ..?
ನೆಗಡಿ ಬಂದಿದೆ ಎಂದು ಮೂಗೇ ಕತ್ತರಿಸಿದರೆ ಹೇಗೆ ಎಂದು ರಮೇಶ್ ಕುಮಾರ್ ಮಾಧ್ಯಮಗಳ ಮೇಲಿನ ನಿರ್ಬಂಧ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಇದು ದುರಾದೃಷ್ಟಕರ ವಿಚಾರ. ಇವೆಲ್ಲವೂ ಕೂಡ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ದೇಶ ನಾಶಗೊಳಿಸುವ ಕ್ರಮವಾಗಿದೆ ಎಂದು ರಮೇಶ್ಕುಮಾರ್ ಕಿಡಿಕಾರಿದರು.
ಇನ್ನು ಸಂವಿಧಾನವನ್ನು ಸಡಿಲಗೊಳಿಸುವಂಥ ಸಂವಿಧಾನೇತರ ಶಕ್ತಿಗಳು ಸಂವಿಧಾನದ ಹೆಸರಲ್ಲೇ, ಅದರ ಬುಡ ಅಲುಗಾಡಿಸುತ್ತಿದ್ದು, ಜನ ಜಾಗೃತರಾಗಬೇಕು. ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ಮಾಜಿ ಸ್ಪೀಕರ್ ಸೂಚ್ಯವಾಗಿ ಹೇಳಿದರು.