ಬೆಂಗಳೂರು : ಕರ್ನಾಟಕ ಲಾಕ್ಡೌನ್ನಿಂದಾಗಿ ಹಣ್ಣು, ತರಕಾರಿ, ಹೂವು ಬೆಳೆದು ನಷ್ಟಗೊಂಡಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಗೌಡರು, ಕೊರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಲಾಕ್ ಡೌನ್ ಜಾರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದೀರಿ. ನಿಮ್ಮೆಲ್ಲಾ ಪ್ರಾಮಾಣಿಕ ಪ್ರಯತ್ನಗಳಿಗೆ ವೈಯಕ್ತಿವಾಗಿ ಹಾಗೂ ನಮ್ಮ ಪಕ್ಷದಿಂದಲೂ ಸಹಕಾರವಿದೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿ ಒಂದು ತಿಂಗಳು ಮುಟ್ಟಿದೆ. ಈ ಸಂದರ್ಭದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಸಾಕಷ್ಟು ತೊಂದರೆಗೊಳಗಾಗಿದ್ದು ತಮಗೆ ಗೊತ್ತೇ ಇದೆ. ಜತೆಗೆ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ರೈತಾಪಿ ಸಮುದಾಯ. ಅದರಲ್ಲೂ ಹಣ್ಣು ತರಕಾರಿ ಹೂವು ಬೆಳೆದವರು ಕಣ್ಣೀರಿಡುವಂತಾಗಿದೆ ಎಂದು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ.
ರೈತರು ಹಾಗೂ ನಾಡಿನ ಸಮಸ್ಯೆ ಬಗ್ಗೆ ಕೂಲಂಕಷವಾಗಿ ಬರೆದಿರುವ ಗೌಡರು, ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.