ಬೆಂಗಳೂರು: ಕೇಂದ್ರ ಜಾರಿಗೆ ತಂದಿರುವ ಸಿಎಎ, ಎನ್ಆರ್ಸಿ ಕಾಯ್ದೆಗಳ ವಿರುದ್ಧ ಜನ ಜಾಗೃತಿ ಅಭಿಯಾನ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ, ತಾಲೂಕು ಮಟ್ಟದಲ್ಲಿ ಜನ ಜಾಗೃತಿ ಅಭಿಯಾನ ನಡೆಯಲಿದೆ. ಹೀಗಾಗಿ ಜನವರಿ 16 ರಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಮುಖಂಡರಿಗೆ ಕಾರ್ಯಗಾರ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು, ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ಬಾಣ ಮುಂದುವರಿಸಿದ್ರು. ಶೇ.2.4 ಇದ್ದ ಹಣದುಬ್ಬರ ಶೇ.7 ಕ್ಕೆ ಜಿಗಿದಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೂ ಪ್ರಧಾನಿ ಅಚ್ಛೇದಿನ್ ಬಂದಿದೆ ಅಂತಾರೆ ಎಂದು ವ್ಯಂಗ್ಯವಾಡಿದ್ರು. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಗೋಶಲ್ ಅವರೇ ಸಿಎಎ ವಿರುದ್ಧ ಮಾತಾಡ್ತಾರೆ. ಇತ್ತ ಉತ್ತರಪ್ರದೇಶದ ಸಚಿವರೊಬ್ಬರು, ಮೋದಿ ವಿರುದ್ಧ ಮಾತಾಡಿದ್ರೆ ಸುಡ್ತೇನೆ ಅಂತಾರೆ. ಅವರಲ್ಲೇ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.
ವಿವಾದಾತ್ಮಹ ಹೇಳಿಕೆ ಕೊಟ್ಟಿರುವ ಸೋಮಶೇಖರ್ ವಿರುದ್ಧ ಸುಮೋಟೊ ಅಡಿ ಕೇಸ್ ದಾಖಲಿಸಬೇಕು. ಇಲ್ಲವಾದ್ರೆ, ಮೋದಿ ಹಿಟ್ಲರ್ ಆಡಳಿತ ಜಾರಿಗೆ ತರ್ತಾರೆ. ಜನರು ಎಚ್ಚೆತ್ತುಕೊಂಡು ಅಧಿಕಾರದಿಂದ ಮೋದಿ, ಅಮಿತ್ ಶಾರನ್ನು ಕೆಳಗಿಳಿಸಬೇಕು. ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಮೋದಿ ಸರ್ವಾಧಿಕಾರಿ ಪ್ರವೃತ್ತಿ ಹೊಂದಿದ್ದು, ಈ ರಾಷ್ಟ್ರದ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಜನ್ರು, ನಿಮ್ಮ ವಿರುದ್ಧ ತಿರುಗಿಬೀಳುವ ಮೊದಲು ಎಚ್ಚೆತ್ತುಕೊಂಡು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ರು.