ಬೆಂಗಳೂರು: ಮಾಜಿ ಸಂಸದ ವಿಜಯ್ ಶಂಕರ್ ಬಿಜೆಪಿ ಸರ್ಪಡೆ ಕಾರ್ಯಕ್ರಮವನ್ನು ನಗರದ ಜಗನ್ನಾಥ ಭವನದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇನ್ನಿತರೆ ಮುಖಂಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಪಕ್ಷ ಬಿಟ್ಟು ಹೋಗಿದಕ್ಕೆ ಬಹಿರಂಗ ಕ್ಷಮೆ ಕೇಳಿದ ವಿಜಯ್ ಶಂಕರ್, ನಾನು ಬಿಜೆಪಿ ಪಕ್ಷ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ, ನಾನು ನನ್ನ ಮಾನಸಿಕ ಸ್ಥಿಮಿತತೆ ನಿರ್ವಹಿಸಲಾಗಿರಲಿಲ್ಲ, ಹಾಗಾಗಿ ಪಕ್ಷ ಬಿಟ್ಟು ಹೋದೆ ಎಂದು ಸೇರ್ಪಡೆ ಕಾರ್ಯಕ್ರಮದಲ್ಲಿ ತಿಳಿಸಿದರು.
ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ವಿಜಯಶಂಕರ್, ಸಂಘಟನೆ ಸಮುದ್ರ ಇದ್ದಹಾಗೆ, ನನ್ನ ಮೂಗು ನಾನೇ ಕೊಯ್ದುಕೊಂಡ ಹಾಗಾಗಿದೆ, ಆದ್ದರಿಂದ ನನ್ನ ಮುಖ ಅವಲಕ್ಷಣವಾಗಿದೆ, ಹೀಗಾಗಿ ಮತ್ತೆ ಬಿಜಿಪಿಗೆ ಸೇರ್ಪಡೆ ಆಗಿದ್ದೇನೆ ಎಂದು ಸೇರ್ಪಡೆಯನ್ನು ಸಮರ್ಥಿಸಿಕೊಂಡರು.
ಮುಂಬರುವ ಹುಣಸೂರು ಚುನಾವಣಾ ಕಣದಲ್ಲಿ ಇಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳಷ್ಟು ಜನ ಚುನಾವಣಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇನ್ನು ಟಿಕೆಟ್ ಪಡೆಯುವ ಆಸೆಯಿಂದಲೇ ಬಿಜೆಪಿಯನ್ನು ಮತ್ತೆ ಸೇರುತ್ತಿದ್ದಾರೆ ಎಂಬ ಭಾವನೆ ಇದೆ. ಆದರೆ ಇದು ನಿಜವಲ್ಲ, ಈ ಮೊದಲೇ ಹೇಳಿದಂತೆ ಬೇಷರತ್ತಾಗಿ ಪಕ್ಷ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಾನು ಮತ್ತೆ ಬಿಜೆಪಿಯನ್ನು ತೊರೆದರೆ ನನ್ನನ್ನು ಹುಚ್ಚಾ ಎಂದು ಜನ ಹುಚ್ಚಾಸ್ಪತ್ರೆ ಸೇರಿಸುತ್ತಾರೆ ಎಂದು ತಮ್ಮ ನಡೆಯನ್ನ ವಿಶ್ಲೇಷಣೆ ಮಾಡಿಕೊಂಡರು.