ಬೆಂಗಳೂರು: ಯಲಹಂಕ ಮತ್ತು ಪುಲಕೇಶಿನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಬಿ.ಪ್ರಸನ್ನಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಸ್ವಾಗತಿಸಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಪುಲಿಕೇಶಿನಗರದ ಮಾಜಿ ಶಾಸಕ ಪ್ರಸನ್ನಕುಮಾರ್ ಹಾದಿ ತಪ್ಪಿದ್ರು. ಇವತ್ತು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಅವರ ಜೊತೆಯೂ ಮಾತಾಡಿದ್ದೇನೆ. ಅವರೇ ಕೆಲ ದಿನ ಬಿಟ್ಟು ಸೇರ್ಪಡೆ ಮಾಡಿಕೊಳ್ಳಿ ಎಂದು ಹೇಳಿದ್ದರು. ಅದರಿಂದಾಗಿ ವಿಳಂಬವಾಗಿದೆ. ಇಲ್ಲವಾದರೆ ಯಾವಾಗಲೋ ಇವರ ಸೇರ್ಪಡೆಯಾಗಿರುತ್ತಿದ್ದರು ಎಂದರು.
ಅಖಂಡ ಶ್ರೀನಿವಾಸಮೂರ್ತಿ, ಸಂಪತ್ ರಾಜ್ ಮೇಲೆ ಆರೋಪ ಮಾಡ್ತಿರೋದು ಅವರ ವೈಯಕ್ತಿಕ ವಿಚಾರ. ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ನಲ್ಲಿ ಸಂಪತ್ ರಾಜ್ ಅವರದ್ದೇನೂ ತಪ್ಪಿಲ್ಲ. ನಾನು ನಮ್ಮ ಪಕ್ಷದ ವರದಿಗಳನ್ನ ನೋಡಿದ್ದೇನೆ. ಬಿಜೆಪಿಯವರು ರಾಜಕೀಯಕ್ಕೆ ಹೇಳ್ತಾರೆ ಬಿಡಿ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಂಪತ್ ರಾಜ್ ಪರ ಬ್ಯಾಟ್ ಬೀಸಿದರು. ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ನ ಯಾವ ನಾಯಕರ ಪಾತ್ರವೂ ಇಲ್ಲ. ಇದು ಕೇವಲ ಬಿಜೆಪಿ ಸರ್ಕಾರದ ವೈಫಲ್ಯ ಎಂದು ದೂರಿದರು.
ಓದಿ: ಆ್ಯಂಬುಲೆನ್ಸ್ ಟೆಂಡರ್ ರದ್ದು : ಆರೋಗ್ಯ ಸಚಿವ ಸುಧಾಕರ್ಗೆ ಹೈಕೋರ್ಟ್ ನೋಟಿಸ್
ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಯಾವ ಅಸಮಾಧಾನ ಇಲ್ಲ. ಒಪ್ಪಂದದಂತೆ ಮೇಯರ್ ಸ್ಥಾನ ಕಾಂಗ್ರೆಸ್ಗೆ ಸಿಗಬೇಕಿತ್ತು. ಯಾಕೆ ಕೈ ತಪ್ಪಿದೆ ಅಂತ ಗೊತ್ತಿಲ್ಲ. ದ್ರುವನಾರಾಯಣ್ ಹತ್ರ ವರದಿ ಕೇಳಿದ್ದೇನೆ. ಮೇಯರ್ ಆಯ್ಕೆಯ ಬಗ್ಗೆ ಜೆಡಿಎಸ್ ಜೊತೆ ಮಾತುಕತೆ ವಿಚಾರವಾಗಿ ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ. ಸಾ.ರಾ.ಮಹೇಶ್ ಜೊತೆ ಮಾತನಾಡಿದ್ದೇನೆ ಎಂದರು.