ಬೆಂಗಳೂರು: ಜೆಡಿಎಸ್ ಪಕ್ಷದಿಂದ ವಿಮುಖರಾಗಿರುವ ಸಾಕಷ್ಟು ಶಾಸಕರು, ಮಾಜಿ ಸಚಿವರು, ಮುಖಂಡರು ಕಾಂಗ್ರೆಸ್ ಪಕ್ಷದತ್ತ ಆಕರ್ಷಿತರಾಗುತ್ತಿದ್ದು, ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಎರಡು ದಿನ ಹಿಂದೆ ಜೆಡಿಎಸ್ ಪಕ್ಷದ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದ ಕೋಲಾರ ಭಾಗದ ನಾಯಕ ಸಿ.ಆರ್. ಮನೋಹರ್ ನಾಳೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ.
ಇನ್ನು ಇವರ ಬೆನ್ನಲ್ಲೇ ಇಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಸದ್ಯವೇ ಅವರೂ ಕಾಂಗ್ರೆಸ್ ಕೈಹಿಡಿಯಲಿದ್ದಾರೆ. ಕಾಂಗ್ರೆಸ್ ಪಕ್ಷ ತಮಗೆ ಮುಂದಿನ ಅವಧಿಗೆ ಸ್ಪರ್ಧಿಸುವ ಅವಕಾಶ ನೀಡುವುದಿಲ್ಲ ಎಂಬ ಮಾಹಿತಿ ಸಿಕ್ಕ ಹಿನ್ನೆಲೆ ಮನೋಹರ್ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಇನ್ನು ಡಿ.10ಕ್ಕೆ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಮರು ಆಯ್ಕೆಗೆ ಜೆಡಿಎಸ್ ಈ ಸಾರಿ ಸಂದೇಶ್ ನಾಗರಾಜ್ಗೂ ಅವಕಾಶ ನೀಡಿಲ್ಲ. ಈ ಹಿನ್ನೆಲೆ ಅವರು ಬಿಜೆಪಿ ಸೇರಲು ತೀರ್ಮಾನಿಸಿದ್ದರು. ಪಕ್ಷದ ಕಚೇರಿಗೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ, ಬಿಜೆಪಿ ಅವರ ಸೇರ್ಪಡೆ ಮಾಡಿಕೊಂಡಿಲ್ಲ. ಇದೀಗ ಕಾಲ ಮಿಂಚಿದೆ, ಆದರೆ ಬೇರೆ ಅವಕಾಶಗಳ ನಿರೀಕ್ಷೆಯಲ್ಲಿ ಕಾಂಗ್ರೆಸ್ ನತ್ತ ಸಂದೇಶ್ ನಾಗರಾಜ್ ಸಹ ಮುಖ ಮಾಡಿದ್ದಾರೆ.
ಮಾಜಿ ಶಾಸಕ ನಾಗರಾಜು, ಸಿ.ಆರ್. ಮನೋಹರ್ ಸೇರ್ಪಡೆಗೆ ನಾಳೆ ದಿನಾಂಕ ನಿಗದಿಯಾಗಿದೆ. ತಮ್ಮ ಬೆಂಬಲಿಗರ ಜತೆ ಅವರು ಸೇರ್ಪಡೆಯಾಗಲಿದ್ದಾರೆ. ಸಂದೇಶ ನಾಗರಾಜ್ ಸೇರ್ಪಡೆಗೆ ದಿನಾಂಕ ನಿಗದಿಯಾಗಿಲ್ಲ. ಮೇಲಿನ ಇಬ್ಬರೂ ನಾಯಕರು ಕೋಲಾರ ಜಿಲ್ಲೆಯವರಾಗಿರುವ ಹಿನ್ನೆಲೆ ಒಂದು ಸಮಾರಂಭದಲ್ಲಿ ಸೇರ್ಪಡೆಯಾಗಲಿದ್ದಾರೆ. ಇನ್ನು ಮೈಸೂರು ಭಾಗದ ನಾಯಕರ ಸೇರ್ಪಡೆಗೆ ಬೇರೆ ದಿನಾಂಕ ನಿಗದಿಯಾಗಲಿದೆ ಎಂಬ ಮಾಹಿತಿ ಇದೆ.
ಸಿದ್ದರಾಮಯ್ಯ ಭೇಟಿ :
ಜೆಡಿಎಸ್ ಟಿಕೆಟ್ ವಂಚಿತ ಸಂದೇಶ್ ನಾಗರಾಜ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿಂದು ಭೋಜನದ ವೇಳೆ ಈ ಭೇಟಿ ನಡೆದಿದ್ದು, ಸಂದೇಶ್ ನಾಗರಾಜ್ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ಜೆಡಿಎಸ್ ನಿಂದ ಈಗಾಗಲೇ ಹೊರ ಬಂದಿರುವ ನಾಗರಾಜ್, ಬಿಜೆಪಿ ಅಥವಾ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಯತ್ನದಲ್ಲಿದ್ದು ಇದರ ಸಲುವಾಗಿಯೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಕಾಂಗ್ರೆಸ್ ಪಕ್ಷದತ್ತ ಸಾಕಷ್ಟು ಜೆಡಿಎಸ್ ನಾಯಕರು ಮುಖ ಮಾಡಿದ್ದಾರೆ. ಹಳೆ ಮೈಸೂರು ಹಾಗೂ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಜೆಡಿಎಸ್ ಬಿಡುವವರಿಗೆ ಕಾಂಗ್ರೆಸ್ ಪಕ್ಷವೇ ಅತ್ಯುತ್ತಮ ಆಯ್ಕೆಯಾಗಿದೆ. ಇದಕ್ಕೆ ಪೂರಕ ವೇದಿಕೆಯನ್ನು ಸಹ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒದಗಿಸಿಕೊಡುತ್ತಿದ್ದಾರೆ.