ಬೆಂಗಳೂರು: ಕೇಶವಕೃಪದಲ್ಲಿರುವವರ ಮನವೊಲಿಸುವ ಸಲುವಾಗಿ ಮತಾಂತರ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯಪಟ್ಟರು.
ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ವಿಧೇಯಕಗಳನ್ನು ಸರ್ಕಾರ ತರುತ್ತೆ. ವಿಧೇಯಕಗಳ ಬಗ್ಗೆ ಗಂಭೀರವಾಗಿ ಚರ್ಚೆಯಾಗಬೇಕು. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಆದರೆ, ಉತ್ತರ ಕೊಡದೇ ಗೊಂದಲ ಮೂಡಿಸ್ತಿದ್ದಾರೆ. ಬಿಲ್ಗಳನ್ನ ಅಂಗೀಕಾರ ಮಾಡಲಾಗುತ್ತಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲೂ ಇದೆ, ಪುನರಾವರ್ತನೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧಾರ್ಮಿಕ ಹಕ್ಕುಗಳ ಉಲ್ಲಂಘನೆ: ಕೇಶವ ಕೃಪದಲ್ಲಿ ಕುಳಿತಿರುವ ಆರ್ಎಸ್ಎಸ್ ನಾಯಕರನ್ನು ಮೆಚ್ಚಿಸಲು ಸರ್ಕಾರ ಹೊರಟಿದೆ. ಇದರ ಬಲವಾಗಿಯೇ ಇಂತಹ ಕಾಯ್ದೆಗಳು ಒತ್ತಾಯಪೂರ್ವಕವಾಗಿ ಜಾರಿಗೆ ಬರುತ್ತಿವೆ. ಈಗ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ. ಈ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ವಿಧೇಯಕ ಗೊಂದಲದಲ್ಲಿದೆ. ಇದು ಸ್ವಾತಂತ್ರ್ಯ ಕೊಡುವ ಹಕ್ಕಲ್ಲ. ಇದು ಧಾರ್ಮಿಕ ಹಕ್ಕು ಕಸಿಯುವ ವಿಧೇಯಕ. ಆರ್ಟಿಕಲ್ 25, 28 ನಿಯಮಗಳನ್ನ ಉಲ್ಲಂಘಿಸಿದೆ. ನಮ್ಮಧರ್ಮ ಆಚರಣೆ ಮಾಡುವ ಹಕ್ಕಿದೆ. ಎಲ್ಲರಿಗೂ ಅವರವರ ಧರ್ಮ ಆಚರಣೆ ಹಕ್ಕಿದೆ. ಆದರೆ ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಇದರಲ್ಲಿದೆ ಎಂದರು.
ಆಮಿಷ, ಒತ್ತಾಯ, ಮತಾಂತರಗಳನ್ನ ಗಮನಿಸಿದೆ. ಹಾಗಾಗಿ ಮತಾಂತರ ಕಾಯ್ದೆ ತಂದಿದ್ದೇವೆ ಅಂತಾರೆ. ಬಲವಂತವಾಗಿ ಮತಾಂತರ ಕೇಸ್ ಹೆಚ್ಚುತ್ತಿವೆಯಂತೆ. ಇಲ್ಲಿಯವರೆಗೆ ಎಷ್ಟು ಪ್ರಕರಣ ದಾಖಲಾಗಿವೆ. ದೌರ್ಜನ್ಯ ಕೇಸ್ ಎಲ್ಲಿ ದಾಖಲಾಗಿವೆ. ಸರ್ಕಾರದ ಬಳಿ ಸಮರ್ಪಕ ಉತ್ತರ ಇದೆಯಾ? ಬಿಜೆಪಿ ಶಾಸಕರು ಸದನದಲ್ಲಿ ಆರೋಪಿಸಿದ್ದರು. ಆದರೆ ಹೊಸದುರ್ಗದ ತಹಶೀಲ್ದಾರ್ ಉತ್ತರ ನೀಡ್ತಾರೆ. ಯಾವುದೇ ಮತಾಂತರ ಇಲ್ಲಿ ಆಗಿಲ್ಲವೆಂದು. ಹಾಗಾದರೆ ಆ ತಹಶೀಲ್ದಾರ್ ಸರ್ಕಾರದ ಭಾಗವಲ್ಲವೇ? ಅದು ಹೇಗೆ ಶಾಸಕರು ಆರೋಪ ಮಾಡಿದ್ರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಗುಜರಾತ್ ಮಾದರಿ ಇಲ್ಲಿ ತಂದಿದ್ದೇವೆ ಅಂತಿದ್ದಾರೆ. ಇದಕ್ಕೆ ಅಲ್ಲಿ ಸೆಕ್ಷನ್ 3ಕ್ಕೆ ತಡೆಯಾಜ್ಞೆ ಸಿಕ್ಕಿದೆ. ಅಂತರಜಾತಿ ವಿವಾಹಕ್ಕೆ ಇದು ಹಿಂದೇಟಾಗುತ್ತೆ. ಇದನ್ನ ಕೋರ್ಟ್ ಹೇಳಿ ಸ್ಟೇ ನೀಡಿದೆ. ಇದು ಕಾಯ್ದೆ ತರುವಾಗ ಸರ್ಕಾರಕ್ಕೆ ಗೊತ್ತಾಗಲಿಲ್ವೇ? ಗುಜರಾತ್ ಬಿಲ್ ಇಲ್ಲಿ ತಂದಿದ್ದೇವೆ ಅಂದ್ರಲ್ಲಾ ಗೊತ್ತಾಗಲಿಲ್ವೇ? ಸಂಬಂಧಿಕರು ದೂರು ಕೊಟ್ಟರೆ ಕೇಸ್ ಹಾಕ್ತಾರಂತೆ. ನಾವು ಮದ್ವೆ ಆಗೋಕೆ ಮೂರನೆಯವರನ್ನ ಕೇಳಬೇಕು. ನಾನು ಇಚ್ಚಿಸಿ ಮತಾಂತರ ಆಗಬಹುದು.
ವ್ಯಕ್ತಿಯ ಸ್ವಾತಂತ್ರ್ಯವನ್ನ ಕೆಣಕಿದ್ದಾರೆ: ಅದಕ್ಕೆ ಸಂಬಂಧಿಕರು ದೂರು ಕೊಟ್ರೆ ಕೇಸ್ ಹಾಕ್ತಾರಂತೆ. ಇದು ಧಾರ್ಮಿಕ ಸ್ವಾತಂತ್ರ್ಯ ಕೊಡುವ ಬಿಲ್ ಅಲ್ಲ. ಸ್ವಾತಂತ್ರ್ಯವನ್ನ ಕಸಿಯುವ ಬಿಲ್. ಸ್ವ ಇಚ್ಚೆಯಿಂದ ಬೇರೆ ಧರ್ಮಕ್ಕೆ ಹೋಗಬೇಕು. ಆಗ ನಾನು ಹೋಗೋಕೆ ಡಿಸಿ ಹತ್ರ ಅರ್ಜಿ ಹಾಕಬೇಕಂತೆ. ತುಮಕೂರಿನಲ್ಲಿ ಒಬ್ಬ ಹುಡುಗ ದೇವಸ್ಥಾನಕ್ಕೆ ಹೋಗಿದ್ದಾನೆ. ಹೋಗಿದ್ದನ್ನ ಅವರ ಮನೆಯವರಿಗೆ ನಿಷೇಧ ಮಾಡಿದ್ದಾರೆ. ಒಬ್ಬ ಸಚಿವರಿಗೆ ಒಂದು ಊರಿಗೆ ಬಿಟ್ಟಿಲ್ಲ. ಇವರು ವ್ಯಕ್ತಿಯ ಸ್ವತಂತ್ರ್ಯಕ್ಕೆ ಕೊಡಲಿ ಪೆಟ್ಟು ಹಾಕಿದ್ದಾರೆ. ವ್ಯಕ್ತಿಯ ಸ್ವಾತಂತ್ರ್ಯವನ್ನ ಕೆಣಕಿದ್ದಾರೆ ಎಂದರು.
ಯುಪಿ, ಗುಜರಾತ್, ಎಂಪಿ ಮಾಡೆಲ್ ಅಂತಾರೆ. ಸುಪ್ರೀಂ ಅಲ್ಲಿನ ಬಿಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಜಸ್ಟೀಸ್ ಲೋಕೂರ್ ಅವರ ಪೀಠ ಆಕ್ಷೇಪ ವ್ಯಕ್ತಪಡಿಸಿದೆ. ಇದು ವ್ಯಕ್ತಿಗೆ ತೊಂದರೆ ಉಂಟುಮಾಡುತ್ತದೆ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕಲ್ವಾ? ಅಂತರ ಜಾತಿ ವಿವಾಹಕ್ಕೆ ಇದು ತೊಂದರೆಯಾಗಲಿದೆ. ನ್ಯಾ ದೀಪಕ್ ಗುಪ್ತಾ ಕೂಡ ಸಂವಿಧಾನದ ವಿರುದ್ಧ ಎಂದಿದ್ದಾರೆ ಎಂದರು.
ಇದು ವೈಯಕ್ತಿಕ ಸ್ವಾತಂತ್ರ್ಯದ ಹರಣ: ಇದು ವೈಯಕ್ತಿಕ ಸ್ವಾತಂತ್ರ್ಯ ಹರಣ ಮಾಡುತ್ತದೆ. ಬೇರೆ ಧರ್ಮ ನಾನು ಒಪ್ಪಬೇಕಾದರೆ ಅರ್ಜಿ ಹಾಕಬೇಕು. ನಮ್ಮ ಎಲ್ಲ ವೈಯಕ್ತಿಕ ಮಾಹಿತಿ ನೀಡಬೇಕು. ಆ ಮಾಹಿತಿಯನ್ನ ಸಾರ್ವಜನಿಕ ಮಾಹಿತಿಗೆ ಹಾಕ್ತಾರೆ. ಹಾಗಾದರೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಕಾ? ಬೇರೆಯವರ ಮುಂದೆ ಮಾಹಿತಿ ಸೋರಿಕೆಯಾಗಬೇಕು. ರಾಜ್ಯದ ಕಾನೂನು ಇಲಾಖೆ ಏನು ಮಾಡ್ತಿದೆ. ಆದ್ಯ ಕೇಸ್ನಲ್ಲಿ ಏನು ವಿವರಣೆಯಿದೆ.
ಪಬ್ಲಿಕ್ ಡಿಸ್ ಪ್ಲೇ ಮಾಡುವುದಕ್ಕೆ ಅವಕಾಶವಿಲ್ಲ. ಇದು ವೈಯಕ್ತಿಕ ಹರಾಸ್ ಮೆಂಟ್ ಆಗುತ್ತೆ ಎಂದಿದೆ. ಇದು ಸರ್ಕಾರ, ಕಾನೂನು ಇಲಾಖೆಗೆ ಗೊತ್ತಾಗಲಿಲ್ವೇ? ಆದ್ಯ ಕೇಸನ್ನ ನೀವು ಉಲ್ಲಂಘನೆ ಮಾಡ್ತಿಲ್ವೇ? ಹಿಮಾಚಲಪ್ರದೇಶದಲ್ಲಿ ಸ್ಟೇ ಕೊಟ್ಟಿದೆ. ಸರ್ಕಾರದ ಮೇಲೆ ಹಲವು ಆರೋಪ ಬಂದಿವೆ. ಅದನ್ನ ಡೈವರ್ಟ್ ಮಾಡೋಕೆ ಈ ಬಿಲ್ ತರ್ತಿದ್ದಾರೆ ಎಂದು ಹೇಳಿದರು.
ಮತಾಂತರ ನಿಷೇಧ ಬಿಲ್ ವಾಪಸ್ ತೆಗೆದುಕೊಳ್ಳಿ. ಇಂತಹ ವಿವಾದಾತ್ಮಕ ಕಾಯ್ದೆ ಏಕೆ ತಂದಿದ್ದೀರಿ. ಗೊಂದಲ ಸೃಷ್ಟಿಸಿ ಪಾಸ್ ಮಾಡಿಕೊಂಡು ಹೋಗ್ತಾರೆ. ಬಿಎಸಿ ಮೀಟಿಂಗ್ ನಲ್ಲಿ ಹೇಳೋದೇ ಒಂದು. ಸದನದಲ್ಲಿ ಮಾಡೋದೇ ಒಂದು. ಯಾವುದೇ ಕೇಸ್ ದಾಖಲಿಲ್ಲ ಅಂತ ಸಮಾಜಕಲ್ಯಾಣ ಇಲಾಖೆ ಹೇಳಿದೆ ಎಂದರು.
ಕಾನೂನು ಹೋರಾಟಕ್ಕೆ ಮುಂದಾಗ್ತೇವೆ: ಕೇಸ್ ಇಲ್ಲದ ಮೇಲೆ ಬಿಲ್ ಏಕೆ ತಂದ್ರು. ಬಿಲ್ ತರುವಾಗ ಸಂಪೂರ್ಣ ಮಾಹಿತಿ ಇರಬೇಕು. ನಾವು ನಮ್ಮ ಸರ್ಕಾರ ಬರುವವರೆಗೆ ಕಾಯಲ್ಲ. ಶೀಘ್ರವೇ ಕಾನೂನು ಹೋರಾಟಕ್ಕೆ ಮುಂದಾಗ್ತೇವೆ. ನಾವು ಅಧಿಕಾರಕ್ಕೆ ಬಂದರೆ ವಾಪಸ್ ಪಡೆಯುತ್ತೇವೆ. ಬೇರೆ ಯಾವ ವಿವಾದಿತ ಕಾಯ್ದೆ ಇವೆ ವಾಪಸ್ ಪಡೆಯುತ್ತೇವೆ. ಗೋಹತ್ಯೆ ನಿಷೇಧಕ್ಕೆ ಫೈನಾನ್ಸ್ ಇಲಾಖೆ ಒಪ್ಪಿಗೆ ಇಲ್ಲ. ಆದರೂ ನಿಷೇಧ ಕಾಯ್ದೆ ಜಾರಿಗೆ ತಂದ್ರು. ಇವರು ನಾಗಪುರ ವಿವಿ ಸ್ಟೂಡೆಂಟ್ ಆಗಿಬಿಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.