ಬೆಂಗಳೂರು: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಂದಿನಿ ಉತ್ಪನ್ನಗಳು ಲಭ್ಯವಾಗಲಿವೆ. ಈ ಸಂಬಂಧ ಕೆಎಂಎಫ್ ಚಾಯ್ ಪಾಯಿಂಟ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಎಂಎಫ್, ಗುಡ್ ಲೈಫ್ ಹಾಲು ಹಾಗೂ ಇತರ ನಂದಿನಿ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಚಾಯ್ ಪಾಯಿಂಟ್ ಜೊತೆ ಪಾಲುದಾರಿಕೆ ಮಾಡಲಾಗಿದೆ. ಚಾಯ್ ಪಾಯಿಂಟ್ ಭಾರತ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿದ್ದು, ಪ್ರಯಾಗ್ ರಾಜ್ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳ 2025 ರಲ್ಲಿ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ. ಮಹಾಕುಂಭ ಮೇಳ ಜ.13 ರಿಂದ ಜ.20 ರವರೆಗೆ ನಡೆಯಲಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆ ಇದೆ.
ಮಹಾ ಕುಂಭ ಮೇಳ ಆಯೋಜಿಸಲಾಗಿರುವ ಸಂಕೀರ್ಣದಲ್ಲಿ ಚಾಯ್ ಪಾಯಿಂಟ್ 10 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಇಲ್ಲಿ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಒಂದು ಕೋಟಿ ಕಪ್ಗಳಿಗಿಂತಲೂ ಹೆಚ್ಚು ಚಹಾ ತಯಾರಿಸಿ, ಒದಗಿಸಲು ಸಿದ್ಧತೆ ಮಾಡಿಕೊಂಡಿದೆ. ಒಂದೇ ಸಮಾರಂಭದಲ್ಲಿ ಅತೀ ಹೆಚ್ಚು ಕಪ್ ಚಹಾ ಮಾರಾಟ ಮಾಡಿ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸುವ ಗುರಿಯನ್ನು ಸಹ ಹೊಂದಿದೆ. ಮಹಾ ಕುಂಭ ಮೇಳದಲ್ಲಿ ಸಿದ್ಧಪಡಿಸಲಾಗುವ ಪ್ರತಿಯೊಂದು ಕಪ್ ಚಹಾ ನಂದಿನಿಯ ಪರಿಶುದ್ಧ ಹಾಗೂ ಉತ್ಪತ ಗುಣಮಟ್ಟದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ.
ಚಹಾದ ಜೊತೆಗೆ ಚಾಯ್ ಪಾಯಿಂಟ್ ಮಳಿಗೆಗಳು ಸಿಹಿ ಉತ್ಪನ್ನ ಮತ್ತು ಮಿಲ್ಕ್ ಶೇಕ್‌ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಿದೆ. ಚಾಯ್ ಪಾಯಿಂಟ್ ಜೊತೆಗಿನ ಪಾಲುದಾರಿಕೆ ಮೂಲಕ ರಾಷ್ಟ್ರದ ಉತ್ತರ ಭಾಗದ ರಾಜ್ಯ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಹಾಗೂ ರಾಷ್ಟ್ರವ್ಯಾಪ್ತಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.
ಚಾಯ್ ಪಾಯಿಂಟ್ ಕೆಎಂಎಫ್ "ನಂದಿನಿ"ಯ ದೀರ್ಘಾವಧಿ ಗ್ರಾಹಕರಾಗಿರುವುದಲ್ಲದೇ, ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಹೆಚ್ಟಿಯ ಗುಡ್ ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿರುತ್ತಾರೆ.
ಈ ಸಹಯೋಗದ ಕುರಿತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಪ್ರತಿಕ್ರಿಯಿಸಿದ್ದು, ಕೆಎಂಎಫ್ ಮಹಾ ಕುಂಭ ಮೇಳ 2025ರಲ್ಲಿ ಚಾಯ್ ಪಾಯಿಂಟ್ ಅವರೊಂದಿಗೆ ಪಾಲುದಾರರಾಗಲು ಅತ್ಯಂತ ಉತ್ಸುಕರಾಗಿದ್ದು, ಈ ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರದರ್ಶಿಸಿ, ವೈವಿಧ್ಯಮಯ ಗ್ರಾಹಕರಿಗೆ ಒದಗಿಸುವ ಮತ್ತು ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆ ಬಲಪಡಿಸಲು ಒಂದು ಸುವರ್ಣ ಅವಕಾಶವಾಗಿದೆ. ಈ ಐತಿಹಾಸಿಕ ಮೇಳದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆಯೊಂದಿಗೆ ಮಹಾ ಕುಂಭ ಮೇಳದ ಯಶಸ್ಸನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಉತ್ತರ ಪ್ರದೇಶ ಮಹಾಕುಂಭ ಮೇಳ; ಕೇವಲ ₹ 1,296ಗೆ ಹೆಲಿಕಾಪ್ಟರ್ನಲ್ಲಿ ಹಾರಾಟಕ್ಕೆ ಸುವರ್ಣಾವಕಾಶ