ಬೆಂಗಳೂರು: ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಕೆಲ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸುದೀರ್ಘ ಪತ್ರ ಬರೆದು ಆರು ಪರಿಹಾರ ಸೂತ್ರ ನೀಡಿರುವ ಅವರು, ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳು ಏನೇನೂ ಸಾಲದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕರ್ನಾಟಕ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಗಂಭೀರ ರೋಗಿಗಳ ಕಾಳಜಿಯಲ್ಲಿ ಕೊರತೆ ಮತ್ತು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳದೇ ಆಗಿರುವ ಪ್ರಮಾದಗಳು, ದೂರದೃಷ್ಟಿ ಮತ್ತು ದಿಕ್ಸೂಚಿ ಇಲ್ಲದ ಪರಿಣಾಮಕಾರಿ ಅಲ್ಲದ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ ಎಂದು ಹೇಳಿದ್ದಾರೆ.
![ಮಾಜಿ ಸಚಿವ ಎಚ್.ಕೆ.ಪಾಟೀಲ್ ಪತ್ರ](https://etvbharatimages.akamaized.net/etvbharat/prod-images/kn-bng-05-hkp-letter-script-7208077_07072020175637_0707f_1594124797_1034.jpg)
ಇದರಿಂದಾಗಿ ಮಹಾಮಾರಿಯ ಹರಡುವಿಕೆ ಇನ್ನಷ್ಟು ಹೆಚ್ಚಾಗಬಹುದೆಂಬ ಕಳವಳಕಾರಿ ಪರಿಸ್ಥಿತಿ ಉಂಟಾಗಿದೆ. ಈ ಕಳವಳಕ್ಕೆ ಹಲವಾರು ಕಾರಣಗಳಿವೆ ಮತ್ತು ಪರಿಹಾರಕ್ಕೆ ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕಾದ ಅನೇಕ ಮಾರ್ಗಗಳಿವೆ. ಸರ್ಕಾರ ಜನರ ಕಾಳಜಿ ದೃಷ್ಟಿಯಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಬೇಕಾಗಿದೆ ಮತ್ತು ತಾರ್ಕಿಕ ಅಂತ್ಯ ಕಾಣುವ ಸೂಕ್ತ ಮತ್ತು ಗಂಭೀರವಾದ ಕ್ರಮಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ವಿಶ್ವದಾದ್ಯಂತ ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗಿರುವ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಮತ್ತು ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅವಶ್ಯಕತೆ ಇರುವುದರಿಂದ ಈ ಕೆಳಕಂಡ ಕೆಲ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಕೋವಿಡ್-19 ಕೊರೊನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆ ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
![ಮಾಜಿ ಸಚಿವ ಎಚ್.ಕೆ.ಪಾಟೀಲ್ ಪತ್ರ](https://etvbharatimages.akamaized.net/etvbharat/prod-images/kn-bng-05-hkp-letter-script-7208077_07072020175637_0707f_1594124797_421.jpg)
ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ. ಕೊರೊನಾ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿ ಬಂದಿದ್ದು, ಸರ್ಕಾರ ಖರೀದಿಸಿರುವ ಉಪಕರಣಗಳು, ಪರಿಕರಗಳು, ಚಿಕಿತ್ಸಾ ಸಾಮಗ್ರಿಗಳು ಕಳಪೆಮಟ್ಟದ್ದಾಗಿವೆ ಎಂದು ದೂರುಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಸಂದೇಹಗಳು ಬಲವಾಗುತ್ತಿವೆ ಎಂದಿದ್ದಾರೆ.
ಈ ಪತ್ರದಲ್ಲಿ ಅವರು ಆರು ಅಂಶಗಳನ್ನು ಪ್ರಮುಖವಾಗಿ ಸೂಚಿಸಿ, ಈ ವಿಷಯಗಳಲ್ಲಿ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.