ಬೆಂಗಳೂರು: ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಇತ್ತೀಚೆಗೆ ನೇಮಕಗೊಂಡಿರುವ ಮಾಜಿ ಸಚಿವ ಹೆಚ್ ಕೆ ಪಾಟೀಲ್ಗೆ ಕೊರೊನಾ ಪಾಸಿಟಿವ್ ಬಂದಿದೆ.
ಕಾಂಗ್ರೆಸ್ ಹೈಕಮಾಂಡ್ನಿಂದ ಮಹಾರಾಷ್ಟ್ರ ರಾಜ್ಯ ಉಸ್ತುವಾರಿಯಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಅವರು ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಉಸ್ತುವಾರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದರು. ಮಹಾರಾಷ್ಟ್ರಕ್ಕೆ ತೆರಳಿದ್ದ ಅವರು, ಅಲ್ಲಿನ ಹಲವು ನಾಯಕರನ್ನು ಭೇಟಿ ಮಾಡಿ ಹಿಂದಿರುಗಿದ್ದರು. ಮಹಾರಾಷ್ಟ್ರದಲ್ಲಿ ಹಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದ್ದರು. ಆದ್ರೆ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿ ಹೆಚ್ಚು ಇದ್ದು, ಈ ಪ್ರವಾಸದ ಸಂದರ್ಭದಲ್ಲಿ ಅವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.
10 ದಿನ ಕ್ವಾರಂಟೈನ್ :
ಹೆಚ್ ಕೆ ಪಾಟೀಲ್ ಕೊರೊನಾ ತಪಾಸಣೆಗೆ ಒಳಗಾಗಿದ್ದು ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಮುಂದಿನ 10 ದಿನಗಳ ಕಾಲ ತಾವು ಮನೆಯಲ್ಲೇ ಕ್ವಾರಂಟೈನ್ ಆಗುವುದಾಗಿ ತಿಳಿಸಿದ್ದಾರೆ. ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲೇ ಉಳಿದುಕೊಳ್ಳುತ್ತೇನೆ. ಆದಷ್ಟು ಶೀಘ್ರ ಗುಣಮುಖನಾಗಿ ಸೇವೆಗೆ ಹಿಂದಿರುಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಕಳೆದ ಎರಡು ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದವರು ಸ್ವಯಂ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಹಾರೈಕೆ:
ಹೆಚ್ ಕೆ ಪಾಟೀಲ್ ಶೀಘ್ರ ಗುಣಮುಖರಾಗಿ ಬರಲಿ ಎಂದು ಮಾಜಿ ಸಚಿವ ಯು ಟಿ ಖಾದರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಬ್ರಿಜೇಶ್ ಕಾಳಪ್ಪ ಸೇರಿದಂತೆ ಹಲವು ನಾಯಕರು ಹಾರೈಸಿದ್ದಾರೆ.