ಬೆಂಗಳೂರು: ಮೈತ್ರಿ ಸಂಬಂಧ ಪಕ್ಷದ ವರಿಷ್ಠರು ಹೇಳಬೇಕು. ನಮ್ಮ ಪಕ್ಷದ ಬೆಳವಣಿಗೆ ವಿಚಾರದಲ್ಲಿ ಪಕ್ಷದ ಮುಖಂಡರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವುಗಳು ಬದ್ಧ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು. ವಿಧಾನಸೌಧದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆಯಷ್ಟೇ ಚರ್ಚೆಯಾಗಿದೆ. ಉಳಿದ ವಿಚಾರಗಳ ಬಗ್ಗೆ ಯಾವ ಚರ್ಚೆ ನಡೆದಿದೆಯೋ ಗೊತ್ತಿಲ್ಲ ಎಂದು ಹೇಳಿದರು.
ಈಗ ಮೊನ್ನೆ ದಿನ ನಮ್ಮ ನಾಯಕರಾದ ದೇವೇಗೌಡರು, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಎಲ್ಲರೂ ಸೇರಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ. ಸೆ.10 ರಂದು ಅರಮನೆ ಮೈದಾನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಏನು ಮಾಡಬೇಕು ಅಂತ ಅಲ್ಲಿ ನಿರ್ಧಾರ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಬೇಕಾ ಹೇಗೆ ಅಂತ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ದೇವೇಗೌಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿ, ಅವರಿಬ್ಬರ ಭೇಟಿಯ ವಿಚಾರ ನನಗೆ ಗೊತ್ತಿಲ್ಲ.
ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ವಿಧಾನಸಭಾ ಚುನಾವಣೆಗೆ ಪಕ್ಷ ಸದೃಢ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ. ಲೋಕಸಭೆಯಲ್ಲಿ ಮೈತ್ರಿ ವಿಚಾರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ. ಹಾಸನದಲ್ಲಿ ನಮ್ಮ ಪಕ್ಷ ಭದ್ರವಾಗಿದೆ ಎಂದು ಹೇಳಿದರು.
ರಾಮನಗರ ಹಾಳಾಗಲು ಕುಮಾರಸ್ವಾಮಿ ಮತ್ತು ಕುಟುಂಬದವರು ಕಾರಣ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ರಾಮನಗರದಲ್ಲಿ ಏನು ಕೆಲಸ ಮಾಡಿದ್ದೇವೆ ಅಂತ ಒಮ್ಮೆ ಅವರು ನೋಡಲಿ. ಸುಪ್ರೀಂ ಕೋರ್ಟ್ ಆದೇಶ ತಂದು ಕೆಲಸ ಮಾಡಿದ್ದು ಕುಮಾರಸ್ವಾಮಿ ಅವರು. ಅವರು ಸಿಎಂ ಆಗಿದ್ದಾಗ ಅನೇಕ ಕೆಲಸ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ಮೆಡಿಕಲ್ ಎಜುಕೇಶನ್ ಮಿನಿಸ್ಟರ್ ಆಗಿದ್ದರು. ಅವರು ಯಾಕೆ ಆಗ ಮೆಡಿಕಲ್ ಕಾಲೇಜು ಮಾಡಿಕೊಳ್ಳಲಿಲ್ಲ. ಹಿಂದೆ ಟೆಂಡರ್ ಕರೆದಿದ್ದರು. ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡಿದ್ದು ಯಾರು?. ಚರ್ಚೆಗೆ ಬಂದಾಗ ವಿಧಾನಸಭೆಯಲ್ಲಿ ಇದಕ್ಕೆ ಉತ್ತರ ಕೊಡುತ್ತೇವೆ ಎಂದು ತಿರುಗೇಟು ಕೊಟ್ಟರು.
ರಾಜ್ಯದ 224 ಕ್ಷೇತ್ರದಲ್ಲಿ ನಗರ ಪ್ರದೇಶ ಬಿಟ್ಟು ಬಹುತೇಕ ಕಡೆ ಮಳೆಯಾಗಿಲ್ಲ. ರೈತರು ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ನೀರಾವರಿ ಪ್ರದೇಶದಲ್ಲೂ ಮಳೆ ಇಲ್ಲ. ಕಂದಾಯ ಸಚಿವರು ಪರಿಹಾರ ಘೋಷಣೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಿಗಳು ಸೇರಿ ಕೂಡಲೇ ಬರಗಾಲ ಘೋಷಣೆ ಮಾಡಬೇಕು. ಜೊತೆಗೆ ಕಂದಾಯ ಇಲಾಖೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್