ಬೆಂಗಳೂರು : ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಕುರಿತು ಎಲ್ಲಾ ಕಡೆ ಅಪೂರ್ಣ ಮಾಹಿತಿ,ತಪ್ಪು ಮಾಹಿತಿ ಇರಿಸಿಕೊಂಡು ಮಾತನಾಡುತ್ತಾರೆ. ಹಾಗಾಗಿ ಘಟನೆಯ ನೈಜತೆ ಬಗ್ಗೆ ಎಲ್ಲರಿಗೂ ತಿಳಿಯಲಿ ಎನ್ನುವ ಕಾರಣಕ್ಕೆ, ನನ್ನ ವೃತ್ತಿ ಜೀವನದ ಬಗ್ಗೆ ಪುಸ್ತಕವನ್ನು ಹೊರತಂದಿದ್ದೇನೆ ಎಂದು ಮಾಜಿ ಡಿಜಿ, ಐಜಿಪಿ ಶಂಕರ್ ಬಿದರಿ ತಿಳಿಸಿದರು.
ಸಾಕಷ್ಟು ಕುತೂಹಲ ಕೆರಳಿಸಿದ್ದ ಶಂಕರ್ ಬಿದರಿ ಆಟೋ ಬಯೋಗ್ರಫಿ ಕೃತಿ ಇಂದು ಬಿಡುಗಡೆಯಾಯಿತು. ಬಸವ ಸದನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಂತರ ತಮ್ಮ ಕೃತಿ ಕುರಿತು ಮಾತನಾಡಿದ ಶಂಕರ್ ಬಿದರಿ, ಕಾರ್ಯಾಚರಣೆ ಕುರಿತ ವಿಷಯಗಳನ್ನು ಹಾಗು ತಮ್ಮ ಸೇವಾವಧಿಯ ವಿಚಾರಗಳು, ಘಟನಾವಳಿಗಳನ್ನು ದಾಖಲೆಯಲ್ಲಿ ಇಡಬೇಕು ಎನ್ನುವ ದೃಷ್ಟಿಯಿಂದ ಈ ಒಂದು ಪುಸ್ತಕವನ್ನು ಬರೆಯಬೇಕು, ಆತ್ಮ ಚರಿತ್ರೆ ಬರೆಯಬೇಕು ಎನಿಸಿತು. ಹಾಗಾಗಿ ಈ ಪ್ರಯತ್ಮ ಮಾಡಿದ್ದೇನೆ.
ವೀರಪ್ಪನ್ ಬಗ್ಗೆ ಸಿನಿಮಾ ಮತ್ತು ಒಟಿಟಿ ಬಗ್ಗೆ ಈಗಾಗಲೇ ಬೇರೆಯವರ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇನೆ. ಆದರೆ ಪುಸ್ತಕದ ಬಗ್ಗೆ ಯಾವುದೇ ಒಡಂಬಡಿಕೆ ಮಾಡಿಕೊಂಡಿಲ್ಲ. ಹಾಗಾಗಿ ನಾನು ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ. ಮೂರು ವರ್ಷ ನಾಲ್ಕು ತಿಂಗಳ ಘಟನಾವಳಿಗಳನ್ನು ಕಥೆಯನ್ನಾಗಿ ಬರೆದಿದ್ದೇನೆ. ಇದರ ಆಂಗ್ಲ ಅವತರಿಣಿಕೆಯನ್ನೂ ಡಾ ರಾಜ್ ಜನ್ಮದಿನದಂದು ಅವರ ಸಮಾಧಿ ಸ್ಥಳದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮರಾಠಿ ಮತ್ತು ತೆಲುಗು ಆವೃತ್ತಿ ಕುರಿತು ಎರಡು ಪ್ರಖ್ಯಾತ ಸಂಸ್ಥೆಗಳು ಮುಂದೆ ಬಂದಿವೆ. ನನಗೆ ಈ ಎರಡು ಭಾಷೆಗಳು ಗೊತ್ತಿಲ್ಲ ಹಾಗಾಗಿ ನಾನು ಅವರಿಗೆ ಪುಸ್ತಕ ಪ್ರಕಟಿಸಲು ಅನುಮತಿ ಕೊಡಲಿದ್ದೇನೆ ಎಂದರು.
ನನ್ನ ಈ ಆತ್ಮ ಚರಿತ್ರೆಯನ್ನು ಓದಿ ನೂರಾರು ಜನರು ಯುವಕರು ಪೊಲೀಸ್ ಹುದ್ದೆಗೆ ಸೇರಲು ಮುಂದೆ ಬಂದರೆ, ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಪ್ರಕಾಶಕರೇ ಮುದ್ರಿಸಿ ಮಾರಾಟ ಮಾಡಲು ಶುಲ್ಕ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಾನೇ ಮುದ್ರಿಸಿ ಪ್ರಕಾಶನ ಸಂಸ್ಥೆಗೆ ಮಾರಾಟಕ್ಕೆ ಮಾತ್ರ ವಹಿಸಿದ್ದೇನೆ. ಹಾಗಾಗಿ ಶುಲ್ಕದಲ್ಲಿ ಕಡಿಮೆಯಾಗಿದೆ. ನಾನು ಇದನ್ನು ಒಂದು ಟ್ರಸ್ಟ್ ಮೂಲಕ ಮಾಡುತ್ತಿದ್ದೇನೆ. ಜನಸಾಮಾನ್ಯರಿಗೆ ಇದು ಮುಟ್ಟಲಿ ಎಂದು ನಾನು ಈ ರೀತಿ ಮಾಡುತ್ತಿದ್ದೇನೆ ಎಂದು ಹೇಳಿದರು.
ನಂತರ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಗಾಂಧಿ ದೇಶಕ್ಕೆ ಕೊಟ್ಟ ಕೊಡುಗೆ, ಮಾರ್ಗದರ್ಶನದಂತೆ ನಡೆದುಕೊಂಡು ಪೊಲೀಸ್ ಅಧಿಕಾರಿಯೊಬ್ಬರ ಆತ್ಮಚರಿತ್ರೆ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಗಾಂಧಿ ಜಯಂತಿಗೆ ಸೂಕ್ತತೆ ಬಂದಂತಾಗಿದೆ. ಆತ್ಮಚರಿತ್ರೆ ಎನ್ನುವುದು ಬಹಳ ಜನರಿಗೆ ಬರೆಯಲು ಸಾಧ್ಯವಿಲ್ಲ, ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಇವೆಲ್ಲವನ್ನೂ ಬರೆಯಲು ಸಾಧ್ಯವಿಲ್ಲ, ಬಿದರಿ ಅವರಿಗೆ ಜ್ಞಾಪಕಶಕ್ತಿ ಬಹಳ ಇದೆ. ಬಿದರಿ ಎಲ್ಲ ವಿಷಯ ನೇರವಾಗಿ ಹೇಳುವ ಸ್ವಭಾವದವರು. ದಿನಾಂಕ, ಸಮಯವನ್ನು ಉಲ್ಲೇಖಿಸಿ ಘಟನೆಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಇದು ಎಲ್ಲರಿಗೂ ಬರುವುದಿಲ್ಲ ಎಂದರು.
ಬಿದರಿ ಬಹಳ ಉತ್ತಮ ಕೃತಿ ರಚಿಸಿದ್ದಾರೆ. ಸಾಮಾನ್ಯ ಬಡ ಕುಟುಂಬದಿಂದ ಬಂದ ವ್ಯಕ್ತಿ. ಸಾಮಾನ್ಯನಿಂದ ಡಿಜಿಪಿವರೆಗೂ ಬೆಳೆದು ಬಂದರು. ಸವಾಲುಗಳನ್ನು ಎದುರಿಸಿದರು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ, ಅದರಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ವೀರಪ್ಪನ್ ಹಾವಳಿ ನಿಯಂತ್ರಣ ಮಾಡಲು ಶ್ರಮಿಸಿದರು. ಕೆಲವೇ ಕೆಲವು ಅಧಿಕಾರಿಗಳು ಇಂತಹ ಸವಾಲುಗಳನ್ನು ಎದುರಿಸಿದ್ದಾರೆ ಎಂದು ಹೇಳಿದರು.
ವೀರಪ್ಪನ್ ಶರಣಾಗಿರಬಹುದು, ಹತ್ಯೆಯಾಗಿರಬಹುದು, ಆ ಹಂತದಲ್ಲಿದ್ದ ತಂಡವನ್ನು ನಾಶಪಡಿಸಲು ಬುನಾದಿ ಹಾಕಿದವರೇ ಬಿದರಿ ಹಾಗಾಗಿ ಸವಾಲು ಎದುರಿಸಿ ಯಶಸ್ಸು ಕಂಡ ವ್ಯಕ್ತಿ ಇವರು ಎಂದು ಬಣ್ಣಿಸಿದರು.
ಇದನ್ನೂ ಓದಿ : ಅಬ್ಬಬ್ಬಾ ಇದು 10 ಕೋಟಿ ಮೌಲ್ಯದ ಶ್ವಾನ..! 'ಭೀಮ'ನ ಜೊತೆ ಸೆಲ್ಫಿಗೆ ಮುಗಿಬಿದ್ದ ಶಿವಮೊಗ್ಗ ಜನ