ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಮುಗಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬ ಸಮೇತ ಮೂರು ದಿನಗಳ ದುಬೈ ಪ್ರವಾಸಕ್ಕೆ ತೆರಳಿದ್ದಾರೆ.
ಅಧಿವೇಶನ ಮುಗಿಯುವ ಒಂದು ದಿನ ಮೊದಲೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಯಡಿಯೂರಪ್ಪ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಟುಂಬ ಸದಸ್ಯರ ಜೊತೆಗೆ ದುಬೈಗೆ ತೆರಳಿದರು.
ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆ ವಿದೇಶ ಪ್ರವಾಸಕ್ಕೆ ತೆರಳಿದ್ದು, ದುಬೈ ಕನ್ನಡ ಸಂಘದ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗಿಯಾಗಲಿದ್ದಾರೆ. ಮೂರು ದಿನಗಳ ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಬಿಎಸ್ವೈ ಕುಟುಂಬ ಮೂಲಗಳು ತಿಳಿಸಿವೆ.
ಓದಿ: Pro Kabaddi League: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ಗೆ ಜಯ
ವಿದೇಶ ಪ್ರವಾಸಕ್ಕೆ ತೆರಳುವ ಹಿನ್ನೆಲೆ ಬೆಂಗಳೂರಿಗೆ ಬರುವ ಮೊದಲೇ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು. ಬೆಳಗಾವಿಯ ಸುವರ್ಣಸೌಧದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ, ನೆಗಟಿವ್ ವರದಿಯೊಂದಿಗೆ ವಿದೇಶಕ್ಕೆ ತೆರಳಿದ್ದಾರೆ.
ಕೋವಿಡ್ ಮಾರ್ಗಸೂಚಿ ಪ್ರಕಾರ ವಿಮಾನಯಾನಕ್ಕೆ 48 ಗಂಟೆ ಒಳಗಿನ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದ್ದು, ಅದರಂತೆ ಯಡಿಯೂರಪ್ಪ ಪರೀಕ್ಷೆ ಮಾಡಿಸಿಕೊಂಡೇ ತೆರಳಿದ್ದಾರೆ. ಮರಳಿ ಬಂದಾಗಲೂ ವಿಮಾನ ನಿಲ್ದಾಣದಲ್ಲಿಯೇ ಕೋವಿಡ್ ಪರೀಕ್ಷೆ ನಡೆಸಿಯೇ ನಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.