ಬೆಂಗಳೂರು: ಕುಮಾರಕೃಪಾ ಪೂರ್ವ ನಿವಾಸಕ್ಕೆ ಪ್ರವೇಶಿಸಿದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು ಕಡಿಮೆ. ಬಹುತೇಕ ಎಲ್ಲಾ ದಿನ ರಾಜ್ಯ ಪ್ರವಾಸದಲ್ಲಿ ಇರುವ ಮಾಜಿ ಸಿಎಂ ಸಂಜೆಯ ನಂತರ ಮಾತ್ರ ಬೆಂಗಳೂರಿನ ನಿವಾಸದಲ್ಲಿ ತಂಗುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ ಎದ್ದು ರಾಜ್ಯದ ಒಂದಲ್ಲ ಒಂದು ಕಡೆ ಪ್ರವಾಸ ತೆರಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇದರ ಜೊತೆಜೊತೆಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷದ ನಾಯಕರಾಗಿ ತಾವು ನಿರ್ವಹಿಸಬೇಕಾದ ಕಾರ್ಯದ ಕುರಿತು ಕೂಡ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಫೆಬ್ರವರಿ ತಿಂಗಳ ಆರಂಭದಿಂದಲೂ ನಿರಂತರ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಫೆ. 1ರಿಂದ ಎರಡು ದಿನ ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದರು. ಫೆ. 3 ಮತ್ತು 4ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಪ್ರವಾಸದಲ್ಲಿದ್ದರು. ತಮ್ಮ ಮತ ಕ್ಷೇತ್ರವಾಗಿರುವ ಬಾದಾಮಿಯ ವಿವಿಧ ಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮರಳಿ ಫೆಬ್ರವರಿ 6 ಮತ್ತು 7ರಂದು ಮೈಸೂರಿನಲ್ಲಿಯೇ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಿಎಂ ಫೆಬ್ರವರಿ 8ರಂದು ಕಲಬುರಗಿಗೆ ತೆರಳಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ಹಿಂದಿರುಗಿ ನಿನ್ನೆ ಬೆಂಗಳೂರಿನ ಕುಮಾರ ಕೃಪಾ ಪೂರ್ವ ನಿವಾಸದಲ್ಲಿ ತಂಗಿದ್ದ ಮಾಜಿ ಸಿಎಂ ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿಗೆ ಪ್ರವಾಸ ತೆರಳಲಿದ್ದಾರೆ.
ಇಂದು ಬೆಳಗ್ಗೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ದಾವಣಗೆರೆಗೆ ತೆರಳುವ ಸಿದ್ದರಾಮಯ್ಯ ಹರಿಹರದ ರಾಜಹಳ್ಳಿಯ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಹೆಲಿಕ್ಯಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಗೆ ತೆರಳಲಿರುವ ಅವರು ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ 6.45ಕ್ಕೆ ಬೆಂಗಳೂರು ತಲುಪಲಿದ್ದಾರೆ.
ಫೆಬ್ರವರಿ 17ರಿಂದ ಬಜೆಟ್ ಪೂರ್ವಭಾವಿ ಜಂಟಿ ಅಧಿವೇಶನ ವಿಧಾನಸೌಧದಲ್ಲಿ ನಡೆಯಲಿದ್ದು, ಪ್ರತಿಪಕ್ಷದ ನಾಯಕರಾಗಿ ಇವರ ಜವಾಬ್ದಾರಿ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆ ಅಧಿವೇಶನ ಸಂದರ್ಭ ಆಡಳಿತ ಪಕ್ಷದ ವಿರುದ್ಧ ಯಾವ ರೀತಿ ಪ್ರತಿ ಅಸ್ತ್ರಗಳನ್ನು ಪ್ರಯೋಗಿಸಬೇಕು ಎಂಬ ಕುರಿತು ಕೂಡ ಈ ಪ್ರವಾಸದ ನಡುನಡುವೆಯೇ ಸಿದ್ದರಾಮಯ್ಯ ಚರ್ಚಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇರುವ ಸಂದರ್ಭ ಬಿಡುವಿನ ವೇಳೆಯಲ್ಲಿ ವಿವಿಧ ಕ್ಷೇತ್ರದ ತಜ್ಞರ ಜೊತೆ ಚರ್ಚಿಸಿ ಮಾಹಿತಿ ಕಲೆಹಾಕುವ ಕಾರ್ಯ ಮಾಡುತ್ತಿದ್ದಾರೆ.