ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹೊಸ ಸರ್ಕಾರಿ ಬಂಗಲೆ ಕುಮಾರಕೃಪ ಪೂರ್ವ ನಿವಾಸದಿಂದ ಬಾದಾಮಿ ಪ್ರವಾಸಕ್ಕೆ ತೆರಳಿದ್ದಾರೆ.
ಪ್ರತಿಪಕ್ಷದ ನಾಯಕರಾಗಿ ಅಧಿಕೃತ ಸರ್ಕಾರಿ ನಿವಾಸ ಪಡೆದಿರುವ ಸಿದ್ದರಾಮಯ್ಯ, ಕುಮಾರಕೃಪಾ ರಸ್ತೆಯ ರೈಲ್ವೆ ಟ್ರಾಕ್ ಪಕ್ಕದಲ್ಲಿರುವ ಹೊಸ ಬಂಗ್ಲೆಗೆ ಪ್ರವೇಶಿಸಿದ ನಂತರ ವಾಸ್ತವ್ಯ ಮಾಡಿರಲಿಲ್ಲ. ನಾಲ್ಕು ದಿನದ ಹಿಂದೆ ಮನೆ ಪ್ರವೇಶಿಸಿದ ನಂತರ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ತೆರಳಿದ್ದ ಅವರು, ನಿನ್ನೆ ರಾತ್ರಿ ವಾಪಸಾಗಿ ತಮ್ಮ ಕುಮಾರಕೃಪ ಪೂರ್ವ ನಿವಾಸದಲ್ಲಿ ತಂಗಿದ್ದರು. ಕಾವೇರಿ ತೊರೆದ ಬಳಿಕ ಇದೇ ಮೊದಲ ಬಾರಿಗೆ ಹೊಸ ಬಂಗ್ಲೆಯಿಂದ ಹೊರಗಡೆ ಪಯಣ ಬೆಳೆಸಿದ್ದಾರೆ.
ತಮ್ಮ ಹೊಸ ನಿವಾಸದಿಂದ ನೇರವಾಗಿ ಕೆಂಪೇಗೌಡ ವಿಮಾನ ನಿಲ್ದಾಣದತ್ತ ಪಯಣ ಬೆಳೆಸಿದ ಅವರು, ಏರ್ಪೋರ್ಟ್ನಿಂದ ಹುಬ್ಬಳ್ಳಿಗೆ ವಿಮಾನದ ಮೂಲಕ ತೆರಳಿದ್ದಾರೆ. ಹುಬ್ಬಳ್ಳಿಯಿಂದ ಬಾದಾಮಿಗೆ ರಸ್ತೆ ಮೂಲಕ ತೆರಳಲಿರುವ ಸಿದ್ದರಾಮಯ್ಯ, ಇಂದು-ನಾಳೆ ಬಾದಾಮಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ, ಎರಡು ದಿನಗಳ ನಂತರವೇ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಬಾದಾಮಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಭೂಮಿ ಕೂಡ ಮಂಜೂರು ಮಾಡಿದ್ದು, ಈ ಸಂತೋಷವನ್ನು ಕೂಡ ಕ್ಷೇತ್ರದ ಜನತೆಯ ಜೊತೆ ಭೇಟಿ ಸಂದರ್ಭವೇ ಹಂಚಿಕೊಳ್ಳಲಿದ್ದಾರೆ.