ಬೆಂಗಳೂರು: "ನೆರೆ ರಾಜ್ಯವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ತಕ್ಷಣ ರಾಜ್ಯ ಸರ್ಕಾರ ನೀರು ಹರಿಸುವ ನಿರ್ಧಾರ ಕೈಗೊಳ್ಳುವ ಬದಲು ತಮಿಳುನಾಡು ಅರ್ಜಿಗೆ ಪ್ರತಿಯಾಗಿ ಕೂಡಲೇ ತಕರಾರು ಅರ್ಜಿ ಸಲ್ಲಿಸಬೇಕಿತ್ತು. ಈ ವಿಷಯದಲ್ಲಿ ಸರ್ಕಾರದಿಂದ ಲೋಪವಾಗಿದೆ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ಕಾವೇರಿ, ಮೇಕೆದಾಟು ಮತ್ತು ಮಹದಾಯಿ ಜಲ ವಿವಾದಗಳ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, "ನಮ್ಮ ನೆಲ, ಜಲ, ಭಾಷೆಯ ರಕ್ಷಣೆ ಹಾಗೂ ನಮ್ಮ ನೀರಿನ ಹಕ್ಕು, ರೈತರ ಪ್ರಶ್ನೆ ಬಂದಾಗ ಪ್ರತಿಪಕ್ಷಗಳು ಮಾತನಾಡದೆ ಮೌನವಾಗಿರಲು ಸಾಧ್ಯವಿಲ್ಲ" ಎಂದರು.
"ನೀರು ಹರಿಸುವ ಮೊದಲೇ ಸರ್ವಪಕ್ಷ ಸಭೆ ಕರೆದಿದ್ದರೆ, ಅದಕ್ಕೊಂದು ಅರ್ಥ ಇರುತ್ತಿತ್ತು. ಈಗ ನೀವು ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಿ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೇನು ಸಮಜಾಯಿಷಿ ನೀಡುತ್ತೀರಿ" ಎಂದು ಪ್ರಶ್ನಿಸಿದ್ದಾರೆ.
"ನೀರು ಬೇಕಾದರೆ ರೈತರೇ ನ್ಯಾಯಾಲಯಕ್ಕೆ ಹೋಗಲಿ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ಸರಿ ಅಲ್ಲ. ರೈತರೇ ನ್ಯಾಯಾಲಯಕ್ಕೆ ಹೋಗುವುದಾದರೆ ಸರ್ಕಾರ ಏತಕ್ಕೆ ಬೇಕು?. ಇಷ್ಟೆಲ್ಲಾ ವ್ಯವಸ್ಥೆಯ ಅಗತ್ಯ ಏನಿದೆ?. ಈ ಬಗ್ಗೆ ತಪ್ಪು ತಿಳಿಯುವ ಅಗತ್ಯ ಇಲ್ಲ. ಪ್ರತಿಪಕ್ಷಗಳನ್ನು ರಾಜಕೀಯ ಮಾಡಬೇಡಿ ಎಂದು ಹೇಳುತ್ತೀರಿ. ಆದರೆ ಇಂಥ ಸೂಕ್ಷ್ಮ ವಿಷಯಗಳಲ್ಲಿ ನಿಮ್ಮ ಜವಾಬ್ದಾರಿ ಏನಿದೆ?. ನೆಲ, ಜಲ, ಭಾಷೆಯ ವಿಷಯದಲ್ಲಿ ರಾಜಕೀಯದ ಅಗತ್ಯ ಇಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಆದರೆ, ಸರ್ಕಾರ ಹೊಣೆಗಾರಿಕೆಯಿಂದ ವರ್ತಿಸಬೇಕು" ಎಂದು ಕಿವಿಮಾತು ಹೇಳಿದರು.
"ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ನಮ್ಮ ಅಧಿಕಾರಿಗಳು ಉತ್ತಮ ರೀತಿಯಲ್ಲಿ ರಾಜ್ಯದ ಪರ ಅಭಿಪ್ರಾಯ ತಿಳಿಸಿದ್ದಾರೆ. ಜಲ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ಆದರೆ, ಅಲ್ಲಿ ತಮಿಳುನಾಡು ಅಧಿಕಾರಿಗಳು ಪಟ್ಟು ಹಿಡಿದು ಸಭೆಯಿಂದ ಹೊರ ನಡೆದಿದ್ದಾರೆ. ಆದರೆ, ಸರ್ವೋಚ್ಚ ನ್ಯಾಯಾಲಯಕ್ಕೆ ತಮಿಳುನಾಡು ಅರ್ಜಿ ಹಾಕಿದಾಗ ನಾವು ಅಷ್ಟೇ ವೇಗದಿಂದ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕಿತ್ತು" ಎಂದು ಮಾಜಿ ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
"ಹಿಂದೆ ದೇವೇಗೌಡರು ಸೇರಿದಂತೆ ಇನ್ನೂ ಹಲವರು ಮುಖ್ಯಮಂತ್ರಿಗಳಾಗಿದ್ದಾಗ ಇಂಥ ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ಎದುರಿಸಲಾಯಿತು ಎಂಬುದನ್ನು ಕಾನೂನು ತಜ್ಞರ ತಂಡದ ಮುಖ್ಯಸ್ಥ ಮೋಹನ್ ಕಾತರಕಿ ಅವರು ಈ ಸಭೆಯಲ್ಲಿಯೇ ಹೇಳಿದ್ದಾರೆ. ಅದೆಲ್ಲಾ ವಿಷಯಗಳನ್ನು ಈ ಸರ್ಕಾರ ತಿಳಿದುಕೊಳ್ಳಬೇಕು" ಎಂದು ತಿಳಿಸಿದರು.
"ಈ ಸಭೆಯಲ್ಲಿ ಏನೇ ವಾದ ಮಾಡಿದರೂ ಕಾವೇರಿ ಪ್ರಾಧಿಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಣಾಮಕಾರಿ ವಾದ ಮಂಡಿಸಬೇಕು. ಅಲ್ಲದೆ, ಈ ದಿನ ಪತ್ರಿಕೆಯೊಂದರಲ್ಲಿ ಸಂಕಷ್ಟ ಸೂತ್ರದ ಬಗ್ಗೆ ನಮ್ಮ ಅಡ್ವೋಕೇಟ್ ಜನರಲ್ ಅವರು ಒಂದು ಹೇಳಿಕೆ ನೀಡಿದ್ದಾರೆ. ಆ ಹೇಳಿಕೆ ಸರಿ ಇದೆ?. ಆದರೆ, ಮೋಹನ್ ಕಾತರಕಿ ಅವರು ಇದಕ್ಕೆ ತದ್ವಿರುದ್ಧವಾದ ಮಾಹಿತಿಯನ್ನು ಈ ಸಭೆಗೆ ನೀಡಿದ್ದಾರೆ. ಹಾಗಾದರೆ, ಯಾರ ಮಾಹಿತಿ ಸರಿ ಇದೆ? ನನಗೆ ತಿಳಿದಿರುವ ಮಾಹಿತಿಯಂತೆ ಸಂಕಷ್ಟ ಸಮಯದಲ್ಲಿ ನೀರನ್ನು ಹಂಚಿಕೊಳ್ಳುವ ಬಗ್ಗೆ ಯಾವುದೇ ಸೂತ್ರ, ಪರಿಹಾರ ಇಲ್ಲ" ಎಂದು ಹೆಚ್ಡಿಕೆ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ, ಕಾವೇರಿ ವಿವಾದ.. ಸಂಕಷ್ಟ ಹಂಚಿಕೆ ಸೂತ್ರ ಅಗತ್ಯ: ಸಿಎಂ ಸಿದ್ದರಾಮಯ್ಯ