ಬೆಂಗಳೂರು: ಅನರ್ಹ ಶಾಸಕರ ಗೆಲುವಿಗೆ ನನ್ನ ಪ್ರಾಣವನ್ನಾದರೂ ನೀಡುತ್ತೇನೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಬಿರುಸಿನ ಎಲೆಕ್ಷನ್ ಕ್ಯಾಂಪೇನ್ ನಡೆಯುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ 2ನೇ ದಿನವಾದ ಇಂದೂ ಸಹ ತಮ್ಮ ಪಕ್ಷದ ಅಭ್ಯರ್ಥಿ ಜವರಾಯಿ ಗೌಡ ಪರ ರೋಡ್ ಶೋ ನಡೆಸಿ ಮತ ಯಾಚಿಸಿದ್ರು. ಇದಕ್ಕೂ ಮುನ್ನ ತಲಘಟ್ಟಪುರದಲ್ಲಿ ಪ್ರಚಾರ ವೇಳೆ ಸಿಎಂ ಯಡಿಯೂರಪ್ಪ ಹಾಗು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಕಿಡಿ ಕಾರಿದರು.
ಬೆಳಗಾವಿಯಲ್ಲಿ ಲಕ್ಷಾಂತರ ಮಂದಿ ರೈತರು ನೆರೆ ಹಾನಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಸಮಸ್ಯೆ ನಿವಾರಿಸುವ ಬಗ್ಗೆ ಸಿಎಂ ಮಾತನಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ತನ್ನ ಸಮಾಜದ ಸಿಎಂರನ್ನೇ ಕೆಳಗಿಳಿಸಿದರು:
ಯಡಿಯೂರಪ್ಪ ಜತೆಗೆ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ವಿರುದ್ಧವೂ ಕುಮಾರಸ್ವಾಮಿ ವಾಕ್ಸಮರ ನಡೆಸಿದ್ರು. ಯಡಿಯೂರಪ್ಪ ನಿನ್ನೆ ಪ್ರಚಾರದ ವೇಳೆ ಅನರ್ಹರು ರಾಜೀನಾಮೆ ನೀಡಿದ್ದರಿಂದ ನಾನು ಸಿಎಂ ಆದೆ. ಹೀಗಾಗಿ ವೀರಶೈವ ಸಮುದಾಯದ ಅಭ್ಯರ್ಥಿ ಬಿಜೆಪಿ ವಿರುದ್ಧ ನಿಂತರೂ ಅವರನ್ನು ಸೋಲಿಸಿ ಎಂದು ವೀರಶೈವ ಸಮಾಜಕ್ಕೆ ಕರೆ ನೀಡಿದ್ದರು. ಅವರು ಬರೇ ಅನರ್ಹರಿಗೆ ಮಾತ್ರ ಸಿಎಂ ಆಗಿದ್ದಾರಾ? ಅಥವಾ ಆರೂವರೆ ಕೋಟಿ ಜನರ ಸಿಎಂ ಆಗಿದ್ದಾರಾ? ಎಂದು ಪ್ರಶ್ನಿಸಿದ್ರು.
ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಹಣದ ಆಮಿಷಕ್ಕೊಳಗಾಗಿ ತಮ್ಮದೇ ಸಮಾಜದ ಸಿಎಂರನ್ನು ಕೆಳಗಿಳಿಸಿದ್ದಾರೆ. ಯಡಿಯೂರಪ್ಪ ಜಾತಿ ಆಧಾರದಲ್ಲಿ ರಾಜಕಾರಣ ಮಾಡುವುದಾದರೆ, ಈ ಭಾಗದ ನಮ್ಮ ಸಮಾಜದ ಜನರು ಯಾವ ರೀತಿಯ ತೀರ್ಮಾನ ಕೈಗೊಳ್ಳಬೇಕು ಎಂಬುದನ್ನು ಸಮಾಜದ ಜನರನ್ನು ಕೇಳ ಬಯಸುತ್ತೇನೆ ಎಂದು ಸೂಚ್ಯವಾಗಿ ಕರೆ ಕೊಟ್ಟರು.
ಎಸ್.ಟಿ.ಸೋಮಶೇಖರ್ ಜತೆ ಚರ್ಚೆಗೆ ಸಿದ್ಧ:
ಯಶವಂತಪುರ ಕ್ಷೇತ್ರ ಅಭಿವೃದ್ಧಿಗೆ ನಾನು ಸುಮಾರು ₹418 ಕೋಟಿ ಅನುದಾನ ನೀಡಿದ್ದೇನೆ. ಈ ಸಂಬಂಧ ಎಸ್.ಟಿ.ಸೋಮಶೇಖರ್ ಜತೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಅನುದಾನ ಸಂಬಂಧ ಎಸ್.ಟಿ.ಸೋಮಶೇಖರ್ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.