ಬೆಂಗಳೂರು: ನನ್ನ ಮಗ ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ಇಂದು ನೆರವೇರಿದೆ. ಆಡಂಬರದ ಮದುವೆಯಲ್ಲಿ ನಮಗೆ ನಂಬಿಕೆ ಇಲ್ಲ. ಅಲ್ಲದೆ ಅದ್ದೂರಿಯಾಗಿ ನನ್ನ ಮಗನ ಆಗುವುದಿಲ್ಲ. ನಮ್ಮನ್ನು ಬೆಳೆಸಿದ ಲಕ್ಷಾಂತರ ಜನರ ಮಧ್ಯೆ ನನ್ನ ಮಗನ ಮದುವೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಿಖಿಲ್ ನಿಶ್ಚಿತಾರ್ಥದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ಹೇಗೆ ಆಗಬೇಕೆಂದು ಎರಡು ಕುಟುಂಬದವರು ಚರ್ಚಿಸಿದ್ದೇವೆ. ಅದೇ ರೀತಿ ಇಂದಿನ ಕಾರ್ಯಕ್ರಮ ನಡೆದಿದೆ. ಈ ದಿನ ನನ್ನ ಜೀವನದಲ್ಲಿ ಅತ್ಯಂತ ಸಂತೋಷದ ಘಳಿಗೆ ಎಂದು ಕುಮಾರಸ್ವಾಮಿ ತಿಳಿಸಿದರು.
ಏಪ್ರಿಲ್ 17ರ ಶುಭ ಶುಕ್ರವಾರದಂದು ರಾಮನಗರ ಚನ್ನಪಟ್ಟದ ನಡುವೆ ನಮ್ಮನ್ನು ಬೆಳಸಿದ ಹಿತೈಷಿಗಳು ಸಮ್ಮುಖದಲ್ಲಿ ನಿಖಿಲ್-ರೇವತಿ ಕಲ್ಯಾಣವಾಗಲಿದೆ. ನಮ್ಮನ್ನು ರಾಜಕಾರಣದಲ್ಲಿ ಬೆಳೆಸಿರುವವರು ಎಲ್ಲರಿಗೂ ಆಹ್ವಾನ ನೀಡುವುದು ದೊಡ್ಡ ಸವಾಲಾಗಿದೆ. ನಮ್ಮನ್ನು ಬೆಳೆಸಿದ ಹಲವಾರು ಲಕ್ಷಾಂತರ ಕುಟುಂಬಗಳಿಗೆ ಆಹ್ವಾನ ಪತ್ರಿಕೆ ನೀಡುತ್ತೇನೆ. ನಾಳೆಯಿಂದ ನಾವು ಪತ್ರಿಕೆ ಹಂಚಿಕೆ ಮಾಡುತ್ತೇವೆ ಎಂದರು.
ಏಪ್ರಿಲ್ 17ರಂದು ಮದುವೆ ದಿನಾಂಕ ನಿಗದಿ ಮಾಡಿದ್ದೇವೆ. ಮುಂದಿನ ರೂಪುರೇಷೆಗಳ ಸಿದ್ಧತೆ ಬಗ್ಗೆ ಹೇಳುತ್ತೇವೆ. ಆದರೆ ಇದು ಆಡಂಬರದ ಮದುವೆ ಅಲ್ಲ. ನಮ್ಮ ಏಳಿಗೆಗೆ ಸಹಕರಿಸಿದ ಲಕ್ಷಾಂತರ ಜನರ ಮಧ್ಯೆ ನನ್ನ ಮಗನ ಮದುವೆ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.