ಬೆಂಗಳೂರು : ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ ಯಾವ ರೈತರ ಜತೆ ರಾಜ್ಯ ಸರ್ಕಾರ ಚರ್ಚೆ ಮಾಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಜೆಡಿಎಲ್ಪಿ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆಯನ್ನು ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ತರುವ ಪ್ರಯತ್ನ ಮಾಡಿದ್ದೇಕೆ?. ಈ ಕಾಯ್ದೆಯನ್ನು ತರುವ ಆತುರ ಏನಿದೆ?. ಮೇ ತಿಂಗಳಲ್ಲೇ ಸುಗ್ರಿವಾಜ್ಞೆ ತಂದಿದೆ. ಯಾವ ವಿರೋಧ ಪಕ್ಷದವರ ಜತೆ ಸರ್ಕಾರ ಚರ್ಚೆ ಮಾಡಿದೆ. ಸಾವಿರಾರು ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಸಾಮಾಜಿಕ ಅಂತರವಿಲ್ಲ, ಇಂತಹ ಪರಿಸ್ಥಿತಿಗೆ ರೈತರನ್ನು ತಳ್ಳಿದವರು ಯಾರು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವಿಚಾರದಲ್ಲಿ ಸಚಿವರು ಲಘುವಾಗಿ ಮಾತನಾಡುತ್ತಿದ್ದಾರೆ. ಮುಂದೆ ಆಗುವ ದುಷ್ಪರಿಣಾಮದ ಹೊರೆಯನ್ನು ಅವರೇ ಹೊರಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಮುಂದಿನ ಮೂರು ದಿನಗಳಲ್ಲಿ ನಡೆಯುವ ಸದನದಲ್ಲಿ ನಮ್ಮ ಚಟುವಟಿಕೆಗಳು ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಸಮಯ ಕಡಿಮೆ ಇದೆ. ಜನ ವಿರೋಧಿ ಕಾಯ್ದೆಗಳ ಬಗ್ಗೆ ಧ್ವನಿ ಎತ್ತಲಾಗುವುದು. ಕೊರೊನಾ ಸೋಂಕು ಸೂಕ್ಷ್ಮವಾದ ವಿಷಯ. ಜನ ಹಾಗೂ ಜನಪ್ರತಿನಿಧಿಗಳ ಆರೋಗ್ಯ ಮುಖ್ಯ ಎಂದರು.
ಸದನ ಮೊಟಕುಗೊಳಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರ ಅಭಿಪ್ರಾಯ ಆಧರಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಚರ್ಚೆ ಇಲ್ಲದೇ ಎಲ್ಲ ಬಿಲ್ಗಳನ್ನು ಪಾಸ್ ಮಾಡಲಾಗುತ್ತಿದೆ. ಸಂಸತ್ತಿನಲ್ಲೂ ಈ ರೀತಿ ಆಗುತ್ತಿದೆ ಎಂದು ಹೇಳಿದರು.
ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳ ಬಗ್ಗೆ ಜನ ಪ್ರತಿನಿಧಿಗಳು, ರೈತ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ನಿನ್ನೆ ಕೊರೊನಾ ಬಗ್ಗೆ ಚರ್ಚೆ ಮಾಡಿ ಏನು ಸಾಧನೆ ಮಾಡಿದ್ರಿ?. ದೊಡ್ಡ ಮಟ್ಟದ ಪ್ರಚಾರ ತೆಗೆದುಕೊಂಡ್ರಿ ಅಷ್ಟೇ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದರು.
ನಿನ್ನೆಯ ಕಲಾಪದಲ್ಲಿ ನಾನು ಭಾಗವಹಿಸಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ. 1600 ಕೋಟಿ ರೂ. ಕೊರೊನಾ ಪ್ಯಾಕೇಜ್ ಸರ್ಕಾರ ಘೋಷಣೆ ಮಾಡಿದ್ದು, ಈಗ ಎಷ್ಟು ಕೊಟ್ಟಿದ್ದಾರೆ ಎಂದು ಕೇಳಿದರು.