ಬೆಂಗಳೂರು : ಕಳೆದ ಕೆಲ ವರ್ಷಗಳಿಂದ ರಾಜಕಾರಣ,ಆಡಳಿತದ ಒತ್ತಡದಲ್ಲಿಯೇ ಇದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು ಹೊಸ ಜವಾಬ್ದಾರಿ ನಿರ್ವಹಿಸುವ ಮೊದಲು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಅದಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಇಂದು ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪುತ್ರ ವಿಜಯೇಂದ್ರ ಹಾಗೂ ಸ್ನೇಹಿತರೊಂದಿಗೆ ಐದು ದಿನಗಳ ಕಾಲ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಆಗಿದ್ದ ವೇಳೆ ದಾವೂಸ್ ಪ್ರವಾಸ ಕೈಗೊಂಡಿದ್ದರು. ಅದು ಸಂಪೂರ್ಣವಾಗಿ ಸರ್ಕಾರಿ ಸಮಾರಂಭದ ಕಾರ್ಯಕ್ರಮವಾಗಿತ್ತು. ಅಲ್ಲಿಂದ ಮರಳಿದ ನಂತರ ರಾಜ್ಯದಲ್ಲಿ ನೆರೆ ಕೊರೊನಾ ನಿರ್ವಹಣೆಯಲ್ಲಿ ಯಡಿಯೂರಪ್ಪ 2 ವರ್ಷ ಆಡಳಿತ ನಡೆಸಬೇಕಾಗಿತ್ತು.
ಒತ್ತಡದಲ್ಲಿಯೇ ಅಧಿಕಾರ ನಡೆಸಿದ್ದ ಯಡಿಯೂರಪ್ಪ, ಈಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಗಣೇಶ ಚತುರ್ಥಿ ನಂತರ ರಾಜ್ಯ ಪ್ರವಾಸ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುತ್ತೇನೆ ಎನ್ನುವ ಸಂಕಲ್ಪ ತೊಟ್ಟಿರುವ ಯಡಿಯೂರಪ್ಪ, ಅದಕ್ಕೂ ಮುನ್ನ ವಿಶ್ರಾಂತಿ ಪಡೆಯಲು ಕುಟುಂಬದ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.