ಬೆಂಗಳೂರು: ಗೌರಿ -ಗಣೇಶ ಹಬ್ಬ ಹಿನ್ನೆಲೆಯಲ್ಲಿ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಮ್ಮ ಕ್ಷೇತ್ರಾದ್ಯಂತ ಬಾಗಿನ ವಿತರಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ಕೊಟ್ಟರು.
ಬಳಿಕ ಮಾಧ್ಯಮಗಳೊಂದಿಗೆ 40 ಪರ್ಸೆಂಟ್ ಕಮಿಷನ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಮಿಷನ್ ಬಗ್ಗೆ ಮೂರ್ಖರು ಮಾತನಾಡುತ್ತಾರೆ. ಯಾವನೋ ಒಬ್ಬನಿಗೆ ಹೇಳಿಕೊಟ್ಟು ಸುಳ್ಳು ಆರೋಪ ಮಾಡಿಸಿದ್ದಾರೆ. ಸುಳ್ಳು ಆರೋಪ ಮಾಡಿದರೆ ಅದು ಸತ್ಯವಾಗಲು ಸಾಧ್ಯವಿಲ್ಲ. ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆ ಮಾಡಿಸಲಿ. ಇದಕ್ಕೆ ನಮ್ಮದೇನು ಅಭ್ಯಂತರ ಇಲ್ಲ ಎಂದರು.
ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ಆರೋಪ ಮಾಡಿಸುತ್ತಿದಾರೆ. ಅಧಿವೇಶನದಲ್ಲಿ ಕಾಂಗ್ರೆಸ್ನವರಿಗೆ ಇದರ ಬಗ್ಗೆ ತಕ್ಕ ಉತ್ತರ ಕೊಡುತ್ತೇವೆ. ಕಮಿಷನ್ ಆರೋಪ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಬಿಎಸ್ವೈ ಹೇಳಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಕಳೆದ 15 ವರ್ಷದಿಂದ ಬಾಗಿನ ವಿತರಿಸುತ್ತಿದ್ದೇವೆ. ಇದು ಚುನಾವಣೆಗೆ ಮಾಡಿದ ಕಾರ್ಯಕ್ರಮವಲ್ಲ. ಕಳೆದೊಂದು ವಾರದಿಂದ ಕ್ಷೇತ್ರಾದ್ಯಂತ ಬಾಗಿನ ವಿತರಿಸಲಾಗುತ್ತಿದೆ. ಶನಿವಾರ ಬಿಜೆಪಿ ಪ್ರಮುಖ ಮಹಿಳಾ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿ ಯಡಿಯೂರಪ್ಪ ಅವರ ಕೈಯಿಂದ ಅರಿಶಿಣ-ಕುಂಕುಮ, ಸೀರೆ ಮತ್ತು ಬಳೆಗಳನ್ನ ವಿತರಿಸಲಾಗುತ್ತಿದೆ. ಇದು ನನ್ನ ಕ್ಷೇತ್ರದ ಹೆಣ್ಣುಮಕ್ಕಳಿಗೆ ಕೊಟ್ಟ ಗೌರವವಾಗಿದೆ.
ಕಮಿಷನ್ ಆರೋಪದ ಪ್ರತಿಕ್ರಿಯಿಸಿದ ಸಚಿವರು, ಮೊದಲು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಲಿ ನಂತರ ಮಾತಾನಾಡಲಿ. ಈಗಾಗಲೇ ಸಚಿವ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಲು ಸಜ್ಜಾರಾಗಿದ್ದಾರೆ. ಇದಕ್ಕೆ ಆರೋಪ ಮಾಡಿದವರು ನ್ಯಾಯಾಲಯದಲ್ಲಿ ಉತ್ತರಿಸಲಿ ಎಂದು ಸವಾಲೆಸೆದರು.
ಇದನ್ನೂ ಓದಿ: ತಯಾರಕರಿಗಿಲ್ಲ ಗಣೇಶ ಹಬ್ಬದ ಸಂಭ್ರಮ : ಮೂರ್ತಿಗಳು ಮಾರಾಟವಾಗದೆ ವ್ಯಾಪಾರಿಗಳು ಕಂಗಾಲು