ಬೆಂಗಳೂರು: ಎಲ್ಲ ರಂಗದಲ್ಲಿ ವೈಫಲ್ಯ ಕಂಡಿರುವುದೇ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಾಧನೆಯಾಗಿದೆ. ಇಷ್ಟು ದಿನದಲ್ಲಿ ಜನರ ವಿಶ್ವಾಸ ಗಳಿಸುವುದು ದೂರದ ಮಾತು. ಅವರ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಸರ್ಕಾರದ ನೂರು ದಿನದ ಸಂಭ್ರಮವನ್ನು ಟೀಕಿಸಿ ಸರಣಿ ಟ್ಚೀಟ್ ಮಾಡಿರುವ ಬೊಮ್ಮಾಯಿ, ಸಂಪೂರ್ಣ ಬಹುಮತದೊಂದಿಗೆ ಬಂದ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು. ಗ್ಯಾರಂಟಿ ನೆಪದಲ್ಲಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆಯನ್ನು ಒಂದು ಕಮಿಷನ್ ದಂಧೆಯಾಗಿ ಮಾಡಿ, ವಿಧಾನಸೌಧದ ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು ಕಮಿಷನ್ ದಂಧೆಗೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರೈತರ ಆತ್ಮಹತ್ಯೆ ನಡೆದರೂ ಆ ಕಡೆ ತಿರುಗಿಯೂ ನೋಡಿಲ್ಲ: ರೈತರು ಬರಗಾಲದ ಬವಣೆಯಲ್ಲಿ ಸಿಕ್ಕರೂ ಕೂಡ ಸರ್ಕಾರ ಆ ಕಡೆ ತಿರುಗಿ ನೋಡಿಲ್ಲ. ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಕೃಷಿ ಉತ್ಪಾದನೆಗೆ ಪೆಟ್ಟು ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ. ಪೂರ್ಣ ಪ್ರಮಾಣದ ಗ್ಯಾರಂಟಿ ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳ ನೀಡಿಲ್ಲ. 10 ಕೆಜಿ ಅಕ್ಕಿ ಗ್ಯಾರಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರದ ಐದು ಕೆಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ. ರಾಜ್ಯದಲ್ಲಿ ಗೃಹಲಕ್ಷ್ಮೀಯರ ಹುಡುಕಾಟ ಪೂರ್ಣಗೊಂಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಮಧ್ಯ ಗ್ಯಾರೆಂಟಿಗಾಗಿ ಎಸ್ಸಿ ಎಸ್ಟಿ ಅಭಿವೃದ್ಧಿ ಹಣ 11 ಸಾವಿರ ಕೋಟಿ ರೂಪಾಯಿ ಬಳಕೆ ಮಾಡಿ ಆ ಸಮುದಾಯದವರಿಗೆ ಸರ್ಕಾರ ಮೋಸ ಮಾಡಿದೆ. ಕಾವೇರಿ ಜಲಾನಯನ ಪ್ರದೇಶದ ರೈತರ ಮತ್ತು ಸಾರ್ವಜನಿಕರ ಹಿತ ಕಾಯಲು ವಿಫಲವಾಗಿದೆ. ನಮ್ಮ ಡ್ಯಾಮ್ಗಳ ಕೀಲಿಕೈಯನ್ನು ತಮಿಳುನಾಡಿಗೆ ಒಪ್ಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಪೈಪೋಟಿಯಿಂದಾಗಿ ಆಡಳಿತದ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ ಸುಲಿಗೆ ಸಾಮಾನ್ಯವಾಗಿದೆ ಎಂದು ಹರಿಹಾಯ್ದಿದ್ದಾರೆ.
ಎಲ್ಲ ರಂಗಗಳಲ್ಲಿ ಸರ್ಕಾರದ ವೈಫಲ್ಯ- ಬೊಮ್ಮಾಯಿ: ಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಜನರ ವಿಶ್ವಾಸ ಗಳಿಸುವುದು ದೂರದ ಮಾತು ಅವರ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದೆ. ಎಲ್ಲ ರಂಗದಲ್ಲಿ ವೈಫಲ್ಯವೇ ಇವರ ಸಾಧನೆ. ಸರ್ಕಾರದ ವಿರುದ್ಧ ಜನ ಸಾಮಾನ್ಯರು, ಸಂಘ ಸಂಸ್ಥೆಗಳು ಧ್ವನಿ ಎತ್ತುವುದನ್ನು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕುವ ಪ್ರಯತ್ನ. ಇದು ಪ್ರಜಾಪ್ರಭುತ್ವ ವಿರೊಧಿ, ಸಂವಿಧಾನ ವಿರೋಧಿ ಹಾಗೂ ಸರ್ವಾಧಿಕಾರಿ ಆಡಳಿತವೆಂದು ನೂರು ದಿನಗಳಲ್ಲಿ ತೋರಿಸಿಕೊಟ್ಟಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಸೇಡು ತೀರಿಸಿಕೊಳ್ಳುವ ಹುನ್ನಾರ: ವಿಚಾರಣಾ ಆಯೋಗ ರಚನೆಗೆ ಬೊಮ್ಮಾಯಿ ಕಿಡಿ