ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಅನರ್ಹ ಅಂದರೆ ನಾಲಾಯಕ್ ಅಂತ ಅರ್ಥ. ಈ ನಾಲಾಯಕ್ ಗಳಿಗೆ ಮತ ಹಾಕಬೇಡಿ. ಇಂತಹ ಪಕ್ಷ ದ್ರೋಹಿಗಳಿಗೆ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದರು.
ಹೊರಮಾವು, ಕಲ್ಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಶಾಸಕರಿಗೆ ನೀಡಿದ ಅನುದಾನ ಹಿಂಪಡೆದಿದ್ದಾರೆ. ಈ ಅವಧಿಯಲ್ಲಿ ಯಡಿಯೂರಪ್ಪ ಶಾಸಕರನ್ನು ಖರೀದಿಸಿ ಹಿಂಬಾಗಿಲಿಂದ ಸರ್ಕಾರ ರಚನೆ ಮಾಡಿದ್ದಾರೆ ಎಂದರು.
ಪಕ್ಷಾಂತರ, ಅಪರೇಷನ್ ಜನಕ ಈ ಯಡಿಯೂರಪ್ಪ. ಹಿಂಬಾಗಿಲ ಮೂಲಕವೇ ಯಡಿಯೂರಪ್ಪ ಸಿಎಂ ಆಗಿದ್ದಾರೆ. 17 ಶಾಸಕರು ಬಿಜೆಪಿಗೆ ಹೋಗಿದ್ದಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅಭಿವೃದ್ಧಿ ಮಾಡೋಕೆ 17 ಜನ ಬಿಜೆಪಿಗೆ ಹೋಗಿಲ್ಲ. ದುಡ್ಡು, ಅಧಿಕಾರಕ್ಕಾಗಿ ಮಾತ್ರ ಬಿಜೆಪಿಗೆ ಹೋಗಿರೋದು. ಕೆ.ಆರ್.ಪುರಂಗೆ ಅನುದಾನ ಕೊಟ್ಟಿದ್ದು ನಾನು. ಅದರಲ್ಲಿಯೂ ಬಸವರಾಜ್ ಲೂಟಿ ಹೊಡೆದಿದ್ದಾರೆ. ಇವತ್ತು ಕೋಟ್ಯಂತರ ರೂಪಾಯಿ ಎಲೆಕ್ಷನ್ಗೆ ಖರ್ಚು ಮಾಡ್ತಿರೋದು ಲೂಟಿ ಮಾಡಿರೋ ದುಡ್ಡು, ಹೀಗಾಗಿ ಬಸವರಾಜ್ನ ನೋಟು ಪಡೆದು ಕಾಂಗ್ರೆಸ್ನ ನಾರಾಯಣಸ್ವಾಮಿಗೆ ಓಟು ನೀಡಿ ಎಂದರು.
ಈ ಚುನಾವಣೆ ನಾವು ಬಯಸಿರಲಿಲ್ಲ. ಅನಗತ್ಯವಾಗಿ ಈ ಚುನಾವಣೆ ಬಂದಿದೆ. ಭೈರತಿ ಬಸವರಾಜ್ ಕಾಂಗ್ರೆಸ್ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದಿದ್ದಾರೆ. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್ನಲ್ಲಿ ಏನು ಕಡಿಮೆ ಆಗಿತ್ತು ಜನ ಕೇಳಿ. ನಾನು ಸಿಎಂ ಆಗಿದ್ದಾಗ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೆ. ಈಗ ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್ಗೆ ಭೈರತಿ ಮೋಸ ಮಾಡಿದ್ದಾರೆ ಎಂದರು.
ಅಂದು ಎ.ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿ ಟಿಕೆಟ್ ಕೊಟ್ಟೆ. ನಾನು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅನ್ನಿಸುತ್ತಿದೆ. ನಾನು ಟಿಕೆಟ್ ಕೊಡಿಸದೇ ಇದ್ದರೆ ಭೈರತಿ ಬಸವರಾಜ್ ಶಾಸಕರೇ ಆಗುತ್ತಿರಲಿಲ್ಲ ಎಂದರು.
15 ಕ್ಷೇತ್ರದಲ್ಲಿ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಜನರು ಇವರನ್ನು ಸೋಲಿಸಲು ಕಾಯ್ತಿದ್ದಾರೆ. ಕೆ.ಆರ್. ಪುರಂನಲ್ಲಿ ಬಸವರಾಜ್ ವಿರುದ್ಧ ಜನ ಇದ್ದಾರೆ. ಬಸವರಾಜ್ ಎಲ್ಲರನ್ನ ಹೆದರಿಸುತ್ತಾರಂತೆ. ನಿಮ್ಮ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರೊಲ್ಲ. ಯಾರು ಹೆದರಬೇಡಿ. ಬಸವರಾಜ್ಗೆ ತಕ್ಕ ಪಾಠ ಕಲಿಸಿ ಎಂದರು.