ಬೆಂಗಳೂರು : ನಾವು ಪರಾವಲಂಬಿಗಳಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಅವರೇ ಪರಾವಲಂಬಿಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಪಕ್ಷದವರೇ ನಮ್ಮ ಮನೆ ಬಾಗಿಲಿಗೆ ಬಂದಿರೋದು. ಹಾಗಾಗಿ, ಪರಾವಲಂಬಿಗಳು ಯಾರು ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.
ಎತ್ತಿನಹೊಳೆ ಯೋಜನೆಯಲ್ಲಿ ಯಾರ್ ಯಾರು ಕಿಸೆ ತುಂಬಿಸಿಕೊಂಡಿದ್ದೀರಿ. ಡಿಪಿಆರ್ ಅಂದರೆ ನಿಮ್ಮ ತೆವಲಿಗೆ ಬದಲಾವಣೆ ಮಾಡಿಕೊಳ್ಳುತ್ತೀರಿ. ಗುತ್ತಿಗೆದಾರರ ಜೇಬು ತುಂಬಿಸಿ ಕೊಡುತ್ತೀರಿ. ರೈತರಿಗೆ ಪರಿಹಾರ ಕೊಡುವುದಕ್ಕೆ ನಿಮ್ಮ ಕೈಯಲ್ಲಿ ಆಗಲ್ಲ. ನಾಡಿನ ಜನತೆಗೆ ನಾವು ದ್ರೋಹ ಮಾಡುವ ಕುಟುಂಬದಿಂದ ಬಂದಿಲ್ಲ.
ಇನ್ನೆಷ್ಟು ವರ್ಷ ಬೇಕು ನೀರು ಕೊಡುವುದಕ್ಕೆ. ಯೋಜನೆಯನ್ನು ಜಾರಿ ಮಾಡಲು ನನ್ನ ಬಿಟ್ರಾ ನೀವು. ರೈತರಿಗೆ ಹಣ ಕೊಡೋಕೆ ಖಜಾನೆಯಲ್ಲಿ ದುಡ್ಡು ಇಟ್ಟಿದ್ದೀರಾ ಅಂತಾ ರಮೇಶ್ ಕುಮಾರ್ ಕೇಳಿದ್ರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯನವ್ರೇ ನೀವು ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆಗೆ ಫೌಂಡೇಶನ್ ಹಾಕಿದ್ರಿ. ನಾವು ಅದಕ್ಕೆ ವಿರೋಧ ಮಾಡ್ತಿದ್ದೀವಾ?. ಎಲ್ಲಿಂದಾದ್ರೂ ನೀರು ಕೊಡಿ ಅಂತಾ ಕೇಳಿದ್ದೆವು. ಈಗ ಯೋಜನೆ ವೆಚ್ಚ 26 ಸಾವಿರ ಕೋಟಿಗೆ ಹೋಗಿದೆ. ನಾನು ಇದ್ದಾಗ ಖಜಾನೆ ತುಂಬಿ ತುಳುಕುತ್ತಿತ್ತಾ?ಒಂದು ಮನೆಯನ್ನೂ ಕೊಡುವುದಕ್ಕೆ ಆಗಲಿಲ್ಲ ಕಾಂಗ್ರೆಸ್ ಸರ್ಕಾರದಿಂದ ಎಂದು ಟೀಕಿಸಿದರು.
ಐದು ವರ್ಷ ಆಡಳಿತ ಮಾಡಿದ್ರಲ್ಲಾ ಸಿದ್ದರಾಮಯ್ಯನವ್ರೇ.. ಈಗ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಅಂತೀರಿ, ಐದು ವರ್ಷಗಳ ನಿಮ್ಮ ಸರ್ಕಾರದಲ್ಲಿ ಏನ್ ಕೊಟ್ಟಿದ್ದೀರಿ. ಕಾಂಗ್ರೆಸ್, ಬಿಜೆಪಿಯದ್ದು ಡಬಲ್ ಸ್ಟ್ಯಾಂಡ್. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ, ನಿಮ್ಮ ತೆವಲಿಗೋಸ್ಕರ ಪಕ್ಷ ಬಿಟ್ಟು ಹೋಗಿರಬಹುದು. ಅವರಿವರ ಬಾಗಿಲು ತಟ್ಟಿಕೊಂಡು ಬಂದಿರೋದು ನೀವು. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಗೆದ್ದಿರೋದು ನಾಲ್ಕೇ ಸೀಟು, ನಮ್ಮನ್ನು ಬೆಂಬಲಿಸಿ ನಮ್ಮನ್ನು ಬೆಂಬಲಿಸಿ ಅಂತಾ ಬರ್ತಿರೋರು ಯಾರು? ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ನನಗೆ ಆರ್ಡರ್ ಮಾಡೋದಕ್ಕೆ ಕಮೆಂಟ್ ಮಾಡೋದಕ್ಕೆ ಹೂ ಈಸ್ ಹೀ.. ಎಲ್ಲಿ ಯಾವ ಅಭ್ಯರ್ಥಿ ಹಾಕಬೇಕು ಅಂತಾ ನಾವು ಇವರನ್ನು ಕೇಳಿ ಹಾಕಬೇಕಾ? ಇವರ ಮುಂದೆ ಅರ್ಜಿ ಹಿಡಿದಿಕೊಂಡು ನಿಲ್ಲಬೇಕಾ? ನಮ್ಮ ಪಕ್ಷದ ವಿಚಾರ ಡಿಕ್ಟೇಟ್ ಮಾಡೋದಕ್ಕೆ ಸಿದ್ದರಾಮಯ್ಯ ಯಾರು ಎಂದು ಕುಮಾರಸ್ವಾಮಿ ಗರಂ ಆದರು. ಮುಸ್ಲಿಂ ಕ್ಯಾಂಡಿಡೇಟ್ ಹಾಕಿದರೆ ಬಿಜೆಪಿಗೆ ಅನುಕೂಲ ಆಗಲಿ ಅಂತಾ ಹಾಕಿದ್ದೇನೆ ಎನ್ನುವುದು. ಒಬಿಸಿ ಹಾಕಿದರೆ ಕಾಂಗ್ರೆಸ್ ಮುಗಿಸೋಕೆ ಎನ್ನುತ್ತಾರೆ. ಏನೆ ಮಾಡಿದರು ಮಾತನಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ನನ್ನ ತಲೆಯಲ್ಲಿ ಇನ್ನೂ ಒಂದೆರಡು ಕೂದಲು ಉಳಿಸ್ಕೊಂಡಿದ್ದೀನಿ. ಐದು ವರ್ಷ ನೀವೇ ಇದರಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತಾ ಈಗೇನೋ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಬಳ್ಳಾರಿಯಿಂದ ಬಂದಿದ್ದರಲ್ಲಪ್ಪ ಸಿದ್ದರಾಮಯ್ಯನವರೇ, ಐದು ವರ್ಷ ಏನು ಕೊಟ್ಟಿರಿ? 18 ಸಾವಿರ ಕೋಟಿ ಎಸ್ಟಿಮೇಟ್ ಮಾಡಿ ಈಗ ಎಷ್ಟಾಗಿದೆ? ಕಾಂಗ್ರೆಸ್‌ನವರ ಡಬಲ್ ಸ್ಟ್ಯಾಂಡರ್ಡ್ ಇದು. ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಗುತ್ತಿಗೆ ತೆಗೆದುಕೊಂಡಿಲ್ಲ. ಅವರ ಜೇಬು ತುಂಬಿಸಿಕೊಳ್ಳುವ ಗುತ್ತಿಗೆ ತೆಗೆದುಕೊಂಡಿದ್ದಾರೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡೋದು ನಿಲ್ಲಿಸಿ ಎಂದು ಬಿಜೆಪಿ-ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಇಬ್ರಾಹಿಂ ಸರಿಯಾದ ಸಮಯಕ್ಕೆ ಬರುತ್ತಾರೆ : ವಿಧಾನಪರಿಷತ್‌ನಲ್ಲೂ 4-5 ರಿಂದ ಸ್ಥಾನ ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಸಿಎಂ ಇಬ್ರಾಹಿಂ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನೂ ಚುನಾವಣೆಗೆ 18 ತಿಂಗಳು ಬಾಕಿ ಇದೆ. ಆಗ ಏನೇನಾಗತ್ತೋ ನೋಡೋಣ. ನಮ್ಮ ಮನೆಗೆ ಕೈ ಹಾಕ್ತೀವಿ ಅಂತಾರಲ್ಲ. ಕಾಂಗ್ರೆಸ್ ಪರಿಸ್ಥಿತಿ ಏನೇನಾಗುತ್ತದೆಯೋ.. ಅವರ ಮನೆಗೆ ಅವರೇ ಬೆಂಕಿ ಇಟ್ಟುಕೊಳ್ಳುತ್ತಾರೋ ಏನೋ ಎಂದು ಸಿದ್ದರಾಮಯ್ಯ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು ನೀಡಿದರು.
ಜಾತಿ ರಾಜಕೀಯ ಮಾಡಬಾರದು ಅಂತಾ ಹೇಳಿದವರು ಇವರೇ ( ಕಾಂಗ್ರೆಸ್). ಎಷ್ಟೇ ಆದರೂ ಒಕ್ಕಲಿಗ ಸಮುದಾಯ ನಮ್ಮನ್ನು ಕೈ ಬಿಡಲ್ಲ. ಈಗ ಮತ್ತೆ ನಮ್ಮ ಸಮುದಾಯದ ನಾಯಕರನ್ನು ಕೈ ಹಾಕುವುದಕ್ಕೆ ಹೊರಟಿದ್ದಾರಲ್ಲ. ಕಾಂಗ್ರೆಸ್ 38-40 ಸೀಟಿಗೆ ಬಂದು ನಿಲ್ಲುತ್ತಾರೆ. ನಿಷ್ಟೆ ಎನ್ನೋದು ಯಾವ ಪಕ್ಷದಲ್ಲಿ ಇಲ್ಲ. ನಮ್ಮ ಕಾರ್ಯಕರ್ತರಲ್ಲಿ ನಿಷ್ಟೆ ಕೊರತೆ ಇಲ್ಲ. ಸ್ಥಾನಮಾನದ ಬಗ್ಗೆ ಆಸೆ ಇಟ್ಟುಕೊಂಡವರಿಗೆ ನಿಷ್ಠೆ ಇರಲ್ಲ ಎಂದು ಹೇಳಿದರು.