ಬೆಂಗಳೂರು: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಂಸ ಉತ್ಪಾದನಾ ಒಕ್ಕೂಟವಾಗಿ ಪರಿವರ್ತಿಸಲು ಅಪೆಕ್ಸ್ ಸಂಸ್ಥೆ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕುರಿಗಾರರ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ. ಶೇ 25ರಷ್ಟು ಸಹಾಯಧನದ ಜೊತೆಗೆ ಶೇ 50 ರಷ್ಟು ಸಾಲ ನೀಡುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿರುವುದಾಗಿ ತಿಳಿಸಿದರು. ಇದಕ್ಕಾಗಿ ಕುರಿಗಾಹಿಗಳ ಒಕ್ಕೂಟ ಮತ್ತು ನಿಗಮ ಎರಡನ್ನೂ ಉಪಯೋಗಿಸಿಕೊಳ್ಳಬೇಕು. ಎರಡರ ಸಮನ್ವಯದೊಂದಿಗೆ ಮುನ್ನಡೆಯಬೇಕು. ಯೋಜನೆಯ ಅನುಷ್ಠಾನಕ್ಕೆ ರಚಿಸುವ ಅಪೆಕ್ಸ್ ಸಂಸ್ಥೆಯು ನಿಗಮದವರನ್ನೂ ಒಳಗೊಂಡಿರಬೇಕು. ಇದು ಮೊದಲ ಹಂತ. ಇನ್ನೂ ಸುಧಾರಣೆಗೆ ಅವಕಾಶಗಳಿವೆ ಎಂದು ಹೇಳಿದರು.
![formation-of-apex-organization-for-meat-production-union](https://etvbharatimages.akamaized.net/etvbharat/prod-images/16104549_thum.jpg)
ಕೇಂದ್ರ ಸರ್ಕಾರದ ಎನ್ಸಿಡಿಸಿ ಸಾಲ ಪಡೆಯಬಹುದು. ಶೇ50ರಷ್ಟು ಸಾಲ, ಶೇ 25ರಷ್ಟು ಸಹಾಯಧನವಾದರೆ ಇನ್ನುಳಿದ ಮೊತ್ತವನ್ನು ಕೊಡುಗೆ ರೂಪದಲ್ಲಿ ಪಡೆಯಬೇಕು. ಕೊಡುಗೆ ನೀಡುವ ವಿಚಾರದಲ್ಲಿ ಒಕ್ಕೂಟದ ಕೆಲಸ ಬಹಳ ಮುಖ್ಯ. ಕುರಿಗಾಹಿಗಳನ್ನು ಸದಸ್ಯರನ್ನಾಗಿಸಿಕೊಳ್ಳಬೇಕು ಹಾಗೂ ಅವರು ಬಡವರಿರುವುರಿಂದ ಬೇರೆಯೇ ಮಟ್ಟದಲ್ಲಿ ಸಹಾಯ ಮಾಡಬೇಕಾಗುತ್ತದೆ. ಇದಕ್ಕಾಗಿ ಸಹಕಾರಿ ಅಪೆಕ್ಸ್ ಬ್ಯಾಂಕ್ ನವರೊಂದಿಗೆ ಪ್ರತ್ಯೇಕ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇದು ಯಶಸ್ವಿಯಾಗಲು ಶೇ 25 ರಷ್ಟು ಹೇಗೆ ಸಹಾಯ ಮಾಡಬಹುದೆಂದು ಚಿಂತನೆ ಮಾಡಬೇಕಾಗುತ್ತದೆ. ಸುಮಾರು 20 ಸಾವಿರ ಸಂಘಗಳಿಗೆ 1.25 ಲಕ್ಷ ಸಹಾಯಧನ ನೀಡಲಾಗುವುದು. 20 ಕುರಿ ಮತ್ತು ಮೇಕೆಗಳನ್ನು ನೀಡಲಾಗುವುದು. ಇದು ಯಶಸ್ವಿಯಾದರೆ, ಒಟ್ಟಾರೆ ಕುರಿ ಸಾಕಣೆ ಒಂದು ವರ್ಷದಲ್ಲಿ ಹೆಚ್ಚಳವಾಗಿ ಕುರಿ ಮಾಂಸ ಉತ್ಪಾದನೆ ಹೆಚ್ಚಾಗಬೇಕು. ಅವರಿಗೆ ಲಾಭ ದೊರಕಿದರೆ ಇನ್ನಷ್ಟು ಹುರುಪಿನಿಂದ ಕೆಲಸ ಮಾಡುತ್ತಾರೆ. ಅಪೆಕ್ಸ್ ಸಂಸ್ಥೆ ರಚಿಸಿ ಹಣ ಬಿಡುಗಡೆಯ ವಿಧಾನಗಳ ಬಗ್ಗೆ ರೂಪುರೇಷೆಗಳನ್ನು ಕಾಲಮಿತಿಯೊಳಗೆ ಸಿದ್ಧಪಡಿಸಲಾಗುವುದು ಎಂದರು.
ನವೆಂಬರ್ ಒಳಗೆ ಫಲಾನುಭವಿಗಳ ಆಯ್ಕೆ : ಯೋಜನೆಗೆ ವ್ಯಾಪಕವಾಗಿ ಪ್ರಚಾರವನ್ನು ಕೊಡಬೇಕು. ಅರ್ಜಿ ಹಾಕದೆಯೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಬಡವರಿಗೆ, ಬಿಸಿಲುಮಳೆ ಗಾಳಿಯಲ್ಲಿ ಕೆಲಸ ಮಾಡುವವರಿಗೆ ಸಣ್ಣ ಸಹಾಯ ಮಾಡುವ ಯೋಜನೆ ಇದಾಗಿದೆ. ನವೆಂಬರ್ ಒಳಗೆ ಆಯ್ಕೆಗಳನ್ನು ಪೂರ್ಣಗೊಳಿಸಿದರೆ, ಚೆಕ್ ಗಳನ್ನು ನೀಡಲು ಪ್ರಾರಂಭಿಸಬಹುದು. ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನಿಗಮದವರು ಸೂಕ್ತ ಕೆಲಸ ಮಾಡಬೇಕು. ಎಷ್ಟು ಕುರಿ ಹೆಚ್ಚಾಗಿದೆ, ಅವುಗಳ ತೂಕದ ಮಾಪನವಾಗಬೇಕು. ಸಂಘಟನೆಯನ್ನು ಬಲಪಡಿಸುವ ಕೆಲಸವೂ ಆಗಬೇಕಿದೆ ಎಂದರು.
ಮೌಲ್ಯವೃದ್ಧಿ ಆಗಬೇಕು : ಸುಲಭವಾಗಿ ಬ್ಯಾಂಕ್ ಖಾತೆ ತೆರೆದು ಕುರಿ ಸಾಕಣೆಗೆ ಸಹಕಾರಿ ಆಗಬೇಕು. ರಫ್ತುದಾರರೊಂದಿಗೆ ನೇರವಾಗಿ ಟೈ ಅಪ್ ಮಾಡುವುದು, ಒಪ್ಪಂದ ಮಾಡಿಕೊಳ್ಳುವುದು ಆಗಬೇಕು. ಕುರಿ ಮತ್ತು ಕುರಿ ಮಾಂಸ ದೊಡ್ಡ ಆರ್ಥಿಕತೆಯಾಗಬೇಕು. ಇದಕ್ಕೊಂದು ಹೊಸ ಆಯಾಮ ಸಿಗಲಿದೆ. ಕೆಎಂಎಫ್ ಕಟ್ಟಿದಂತೆಯೇ ಮಾಂಸ ಉತ್ಪಾದನೆ ದೊಡ್ಡ ಆರ್ಥಿಕತೆಯಾಗಬೇಕು. ಹಾಲು, ಮಾಂಸದ ಗುಣಮಟ್ಟ ಹೆಚ್ವಿಸುವುದಲ್ಲದೇ ಮೌಲ್ಯವೃದ್ಧಿ ಮಾಡುವಂತಾಗಬೇಕು. ಈ ಕುರಿತಂತೆ 8-10 ದಿನಗಳಲ್ಲಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕುರಿಗಾಹಿಗಳಿಗೆ ಸ್ಥಿರವಾದ ಬದುಕು: ಗ್ರಾಮೀಣ ಪ್ರದೇಶಗಳಲ್ಲಿ ಗೋ ಮತ್ತು ಕುರಿ ಸಾಕಣೆ ಪ್ರಮುಖವಾದದ್ದು. ನಮ್ಮಲ್ಲಿ ಶೇ. 70 ರಷ್ಟು ಬಯಲುಸೀಮೆ ಇದೆ. ಒಣ ಹವೆ ಹೆಚ್ಚಿದ್ದು, ಹಸಿರು ಹುಲ್ಲು ಮೇಯುವ ಪ್ರಾಣಿಗಳ ಸಂಖ್ಯೆ ಇಲ್ಲಿ ಹೆಚ್ಚು. ನಮ್ಮ ಆಸ್ತಿ ಇದು. ಇದರ ಅನುಗುಣವಾಗಿ ನಮ್ಮ ಆಹಾರ ಪದ್ಧತಿಯೂ ಇದೆ. ಕೋಳಿ ಮತ್ತು ಕುರಿಗೆ ಬೇಡಿಕೆ ಇದೆ. ಗೋವಿನ ಮಾಂಸಕ್ಕೆ ಧಾರ್ಮಿಕ ಮತ್ತಿತರ ಕಾರಣಗಳಿಂದ ಬೇಡಿಕೆ ಕಡಿಮೆ ಇದೆ. ಕುರಿ ಮಾಂಸ ವಿದೇಶಕ್ಕೆ ರಫ್ತು ಆಗುತ್ತದೆ. ಆದರೆ ಕುರಿಗಾಹಿಗೆ ಈ ಲಾಭ ಮುಟ್ಟುತ್ತಿಲ್ಲ. ಏಕೆಂದರೆ ಅವರು ಸಂಘಟಿತರಾಗಿಲ್ಲ. ಸಾಮಾಜಿಕವಾಗಿಯೂ ಸಮಾಜ ಅವರನ್ನು ಗುರುತಿಸದೇ ದೂರ ಇಟ್ಟಿದೆ. ಇದು ನಮ್ಮ ದುರ್ದೈವ. ಹಾಲುಮತ ಸಮಾಜದವರೊಂದಿಗೆ ನಮ್ಮ ತಂದೆಯವರ ಕಾಲದಿಂದಲೂ ಆತ್ಮೀಯ ಸಂಬಂಧವಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಬಾರಿಯ ಆಯವ್ಯಯದಲ್ಲಿ ಕುರಿಗಾರಿಗಳಿಗೆ ಅನುಗ್ರಹ ಯೋಜನೆಯನ್ನು ಪುನಃ ಜಾರಿ ಮಾಡಲಿದ್ದೇವೆ. ಕುರಿಗಳ ಹಟ್ಟಿ ನಿರ್ಮಿಸಲು ಅನುದಾನ ನೀಡಲಾಗಿದೆ. ಇದರಿಂದ 5-6 ಲಕ್ಷ ಜನರಿಗೆ ಅನುಕೂಲವಾಗಲಿದೆ. ಸ್ಥಿರವಾದ ಬದುಕು ಸಿಗಲಿದೆ ಎಂದರು.
ಇದನ್ನೂ ಓದಿ : ಆಜಾದಿ ಕಾ ಅಮೃತ ಮಹೋತ್ಸವ.. ಸಿಎಂ ಸಮ್ಮುಖದಲ್ಲಿ ನಡುರಾತ್ರಿ ಧ್ವಜಾರೋಹಣ