ಆನೇಕಲ್: ಜನರ ಸ್ವಾರ್ಥಕ್ಕೆ ಕಾಡನ್ನು ಆವರಿಸಿಕೊಂಡು ಅಕ್ರಮ ಮೆರೆಯೋ ಮಾನವನ ಒತ್ತುವರಿಗೆ ಕಾಡು ನಾಶವಾಗುತ್ತಿದೆ. ಹಾಗಾಗಿ, ಕಾಡಲ್ಲಿನ ಪ್ರಾಣಿಗಳು ನಾಡಿನತ್ತ ಮುಖಮಾಡುತ್ತಿವೆ. ಇದೇ ಮೊದಲು ಬಾರಿಗೆ ಒಂದು ಕಾಡೆಮ್ಮೆ ಹಾಗೂ ಕೋಣ ಆನೇಕಲ್ ನಗರಕ್ಕೆ ಆಗಮಿಸಿ ಜನರಲ್ಲಿ ಅಚ್ಚರಿ ಮೂಡಿಸಿವೆ.
ಹೌದು, ಬೆಂಗಳೂರು-ಹೊಸೂರು ಹೆದ್ದರಿ ಹಳೆ ಚಂದಾಪುರ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಖಾಲಿ ಲೇಔಟ್ನಲ್ಲಿ ಕಾಡೆಮ್ಮೆಗಳು ಬೀಡುಬಿಟ್ಟಿದ್ದವು. ಸ್ಥಳೀಯರು ಸೂಕ್ಷ್ಮವಾಗಿ ಗಮನಿಸಿದಾಗ ಕಾಡೆಮ್ಮೆಗಳೆಂದು ಖಾತರಿಯಾಗಿವೆ. ಲೇಔಟ್ನ ಕಾವಲುಗಾರರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದಾಗಲೇ ಕಾಡೆಮ್ಮೆಗಳ ಇರುವಿಕೆ ಬಯಲಾಗಿತ್ತು. ಹೀಗಾಗಿ ಶುಕ್ರವಾದಿಂದ ಕಾಡೆಮ್ಮೆಗಳಿಗೆ ಮೇವು-ನೀರು ಒದಗಿಸಿದ ಬನ್ನೇರುಘಟ್ಟ ಅರಣ್ಯಾಧಿಕಾರಿಗಳು ಕಾಡೆಮ್ಮೆಗಳನ್ನು ರಕ್ಷಿಸಿ ಕಾಡಿಗೆ ಬಿಡಲು ಹರಸಾಹಸಪಟ್ಟರು.
ಶನಿವಾರ ಮಧ್ಯಾಹ್ನದ ವೇಳೆಗೆ ಕಾಡೆಮ್ಮೆಯನ್ನು ಸುರಕ್ಷಿತವಾಗಿ ಅರವಳಿಕೆ ನೀಡಿ ಬೃಹತ್ ಕ್ರೇನ್ ಮೂಲಕ ಬನ್ನೇರುಘಟ್ಟ ಕಾಡಿಗೆ ಬಿಡುವ ಪ್ರಯತ್ನ ನಡೆಯಿತಾದರೂ ಇದಕ್ಕೆ ತಕ್ಕ ಸಲಕರಣೆ, ಮಾನವ ಸಂಪನ್ಮೂಲ ಹಾಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳ ಲಭ್ಯತೆ ಸಂಜೆಯವರೆಗೂ ಕಾಯಬೇಕಾಯಿತು. ಕೊನೆಗೆ ಕಾಡೆಮ್ಮೆಗೆ ಮಾತ್ರ ಅರವಳಿಕೆ ಯಶಸ್ವಿಯಾಗಿದ್ದು ಒಂದನ್ನು ಮಾತ್ರ ಸಂರಕ್ಷಿಸಿ ಮತ್ತೊಂದು ಕಾಡು ಕೋಣದ ರಕ್ಷಣಾ ಕಾರ್ಯ ಇಂದು ಕೈಗೊಳ್ಳಲಾಗಿದೆ.
ಒಟ್ಟಾರೆ ಇದೇ ಮೊದಲು ಕಾಡೆಮ್ಮೆ ಆನೇಕಲ್ ಭಾಗದಲ್ಲಿ ಕಂಡು ಬಂದಿರುವುದಂತೂ ಅಚ್ಚರಿ ಮೂಡಿಸಿದೆ. ಇನ್ನು ಉಳಿದ ಕಾಡುಕೋಣವನ್ನು ಸಂರಕ್ಷಿಸಲು ಇಂದು ಕಾರ್ಯಾಚರಣೆ ನಡೆಸುತ್ತಿದ್ದು, ಸುರಕ್ಷಿತವಾಗಿ ಕಾಡಿಗೆ ಕಳುಹಿಸಲು ಸಿದ್ದತೆಯಂತೂ ನಡೆದಿದೆ.