ಬೆಂಗಳೂರು: ವಾಹನ ಸಂಚಾರದಿಂದ ಪಾದಾಚಾರಿಗಳಿಗೆ ತೊಂದರೆಯಾಗದಂತೆ ಪ್ರತ್ಯೇಕವಾಗಿ ನಡೆದಾಡಲೆಂದು ಪುಟ್ಪಾತ್ ಮಾಡಿರುತ್ತಾರೆ. ಆದರೆ, ವಾರ್ಡ್ ನಂ.4ರ ವ್ಯಾಪ್ತಿಯಲ್ಲಿ ಫುಟ್ಪಾತ್ ಆಕ್ರಮಿಸಿಕೊಂಡು ಬಿಂದಾಸ್ ಆಗಿ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳು ಅಪಘಾತದ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಲಹಂಕ ಉಪನಗರದ ಡೈರಿ ಸರ್ಕಲ್ನಿಂದ ಬೊಮ್ಮಸಂದ್ರ ಸರ್ಕಲ್ವರೆಗೆ ಇರುವ ಬಹುತೇಕ ಮಳಿಗೆಗಳು ಫುಟ್ಪಾತ್ ಮೇಲೆ ಟೀ ಅಂಗಡಿ, ಪ್ಲಾಸ್ಟಿಕ್ ಅಂಗಡಿ, ಫರ್ನಿಚರ್ ಅಂಗಡಿಗಳನ್ನು ವಿಸ್ತರಿಸಿಕೊಂಡಿದ್ದಾರೆ. ಈ ಬಗ್ಗೆ ಯಲಹಂಕದ ಉಪನಗರದ ‘ಸಿಟಿಜನ್ ಪೋರಂ’ ಸಂಘದವರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಮೌಖಿಕವಾಗಿ ದೂರು ನೀಡಿ ಫುಟ್ಪಾತ್ ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.
ಅಸಹಾಯಕ ಕಾರ್ಪೋರೇಟರ್:
ಇನ್ನು ಈ ಸಮಸ್ಯೆ ಬಗ್ಗೆ ಈಟಿವಿ ಭಾರತ್, ವಾರ್ಡ್ ನಂ.4ರ ಕಾರ್ಪೋರೇಟರ್ ಎಂ.ಸತೀಶ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಸುಮಾರು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಫುಟ್ಪಾತ್ ಮೇಲಿಟ್ಟಿರುವ ವಸ್ತುಗಳನ್ನು ನಾವು ವಶಪಡಿಸಿಕೊಂಡರೆ 2-3 ದಿನಗಳ ಬಳಿಕ ಮತ್ತೆ ಇಟ್ಟುಕೊಳ್ಳುತ್ತಾರೆ ಎಂಬ ಅಸಹಾಯಕತೆಯನ್ನು ತೋಡಿಕೊಂಡರು. ಅಧಿಕಾರಿಗಳಿಗೆ ತಿಳಿಸಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿದರು.
ಪ್ರಶ್ನಿಸಿದವರಿಗೆ ಬೆದರಿಸುತ್ತಾರೆ:
ಯಲಹಂಕ ಉಪನಗರದಿಂದ ಬೊಮ್ಮಸಂದ್ರ ಸರ್ಕಲ್ವರೆಗೂ ಬಹುತೇಕ ದೊಡ್ಡ ದೊಡ್ಡ ಅಂಗಡಿಗಳಿವೆ. ಇವುಗಳ ಮಾಲೀಕರು ಪ್ರಭಾವಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಯಾರಾದರೂ ಪ್ರಶ್ನಿಸಲು ಹೋದರೆ ಪಾದಾಚಾರಿಗಳಿಗೆ ಬೆದರಿಕೆ ಹಾಕುತ್ತಾರೆಂದು ಪಾದಾಚಾರಿಗಳು ಹೇಳುತ್ತಾರೆ. ಈ ಬಗ್ಗೆ ಮಾಧ್ಯಮದವರೊಂದಿಗೂ ಮಾತನಾಡಲು ಭಯಭೀತರಾಗುತ್ತಾರೆ ಎನ್ನಲಾಗಿದೆ.
ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಆಗ ರಸ್ತೆಗಿಳಿಯಲು ಭಯವಾಗುತ್ತದೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇತ್ತ ಗಮನವಹಿಸಿ ಪಾದಾಚಾರಿಗಳ ಮಾರ್ಗವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಾದಾಚಾರಿಗಳು ಮನವಿ ಮಾಡುತ್ತಾರೆ.