ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಕೋವಿಡ್ ವಾರಿಯರ್ಗಳಿಗೆ ಊಟ ವಿತರಿಸುವ ಕಾರ್ಯಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕೊರೊನಾ ಎರಡನೇ ಅಲೆ ಶುರುವಾದ ಬೆನ್ನಲ್ಲೇ ಇಸ್ಕಾನ್ ಸಂಸ್ಥೆ ಅಕ್ಷಯ ಪಾತ್ರೆ ಯೋಜನೆಯಡಿ 5 ಲಕ್ಷ ಉಚಿತ ಊಟವನ್ನು ಕೂಲಿ ಕಾರ್ಮಿಕರು, ಬಡವರಿಗೆ ಪೂರೈಸುತ್ತಿದೆ. ಅಕ್ಷಯ ಪಾತ್ರೆ ಯೋಜನೆ ಈಗಾಗಲೇ ಬಹಳ ದೊಡ್ಡ ಹೆಸರು ಮಾಡಿದೆ. ಇಸ್ಕಾನ್ನವರು ಭಕ್ತಿಯ ಜೊತೆ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. 5 ಸಾವಿರ ಪೊಲೀಸರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದ ಎಂದರು. ಕೊರೊನಾ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಇದೆ. ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.
ಇನ್ನು ಕೋವಿಡ್ ಪರೀಕ್ಷೆ ಕಡಿಮೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಟೆಸ್ಟ್ ಮಾಡುವ ಸಂಖ್ಯೆ ಕಡಿಮೆಯಾಗಿಲ್ಲ. ವಿಧಾನ ಮಾತ್ರ ಬದಲಾಗಿದೆ. ಲಾಕ್‌ಡೌನ್ ಕಾರಣ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಟೆಸ್ಟ್ ಪ್ರಮಾಣ ಕಡಿಮೆಯಾಗಿದೆ. ಆದರೆ ಸರ್ಕಾರದಿಂದ ಟೆಸ್ಟಿಂಗ್ ಕಡಿಮೆ ಮಾಡಿಲ್ಲ ಎಂದು ತಿಳಿಸಿದರು.
ಲಾಕ್‌ಡೌನ್ ವಿಸ್ತರಣೆ ಕುರಿತು ಅಧಿಕೃತ ಸಭೆಯಾಗಿಲ್ಲ:
ಲಾಕ್‌ಡೌನ್ ವಿಸ್ತರಣೆ ಕುರಿತು ಚರ್ಚೆಯಾಗಿಲ್ಲ. ಸಿಎಂ ಮಟ್ಟದಲ್ಲಿ ಅಧಿಕೃತವಾಗಿ ಇನ್ನೂ ಸಭೆ ನಡೆಸಿಲ್ಲ. ಟಾಸ್ಕ್ ಫೋರ್ಸ್ ಜೊತೆಗೆ ಸಿಎಂ ಚರ್ಚೆ ಮಾಡುತ್ತಾರೆ ಎಂದರು. ಸಿಎಂ ಅಂಕಿ-ಅಂಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದನ್ನು ಆಧರಿಸಿ ಸಿಎಂ ಕ್ರಮ ವಹಿಸುತ್ತಾರೆ ಎಂದು ಲಾಕ್‌ಡೌನ್ ಬಗೆಗಿನ ಮಾಧ್ಯಮದವರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದರು.