ಬೆಂಗಳೂರು: ಕೊರೊನಾ ಜಾಗತಿಕ ಮಟ್ಟದ ಮಾರಕ ಖಾಯಿಲೆ. ಹಾಗಾಗಿ ಕೊರೊನಾ ಹರಡದಂತೆ ಎಲ್ಲರು ಎಚ್ಚರಿಕೆ ವಹಿಸಬೇಕು. ಕೈ ತೊಳೆಯೋದು, ಸ್ಯಾನಿಟೈಸರ್ ಬಳಸುವುದು, ಜಾತ್ರೆ, ಹಬ್ಬ ಸಮಾರಂಭದಿಂದ ದೂರ ಇರಬೇಕಾಗುತ್ತದೆ ಎಂಬುದು ಸೇರಿದಂತೆ ಮಾಸ್ಕ್, ಸ್ಯಾನಿಟೈಸರ್ ಕೊಳ್ಳುವಾಗಲೂ ಎಚ್ಚರ ವಹಿಸಬೇಕು ಎಂದು ಆಹಾರ ತಜ್ಞ ಕೆ.ಸಿ ರಘು ಈ ಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿ ಸ್ಯಾನಿಟೈಸರ್, ಮಾಸ್ಕ್ ಖರೀದಿಸುವಾಗ ಎಚ್ಚರ ವಹಿಸಬೇಕು. N95 ಮಾಸ್ಕ್, ಸರ್ಜಿಕಲ್ ಮಾಸ್ಕ್ಗಳು ಅಧಿಕೃತ. ಇವುಗಳಲ್ಲಿ BIS ಮಾರ್ಕ್, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಇರುವುದು ಅತಿಮುಖ್ಯ ಎಂದರು. ಮೊದಲಿನಿಂದ ಮಾರುಕಟ್ಟೆಯಲ್ಲಿ ಇದ್ದ ಸಂಸ್ಥೆಗಳ ಸ್ಯಾನಿಟೈಸರ್ ಮಾತ್ರ ಖರೀದಿಸಬೇಕು ಎಂದರು. ಅಧಿಕೃತವಾದ ಸೋಂಕು ನಿವಾರಕ ದ್ರಾವಣಗಳನ್ನು, ಅದರಲ್ಲೂ ಶೇಕಡಾ 60 ರಷ್ಟು ಆಲ್ಕೋಹಾಲ್ ಇದ್ದರೆ ಮಾತ್ರ ಖರೀದಿಸಬೇಕು ಎಂದರು.
ಇನ್ನು ಕೊರೊನಾ ವೈರಸ್ ನಮ್ಮನ್ನು ಬಾಧಿಸದಂತೆ, ರೋಗನಿರೋಧಕ ಶಕ್ತಿ ಏಕಾಏಕಿ ಹೆಚ್ಚಾಗಲು ಸಾಧ್ಯವಿಲ್ಲ. ಹೆಚ್ಚೆಚ್ಚು ಹಣ್ಣು ತರಕಾರಿ ಬಳಸಬೇಕು. ಬೇಳೆ ಕಾಳು, ಮೀನು, ಮೊಟ್ಟೆ, ಬೇಯಿಸಿದ ಮಾಂಸ ಸೇವಿಸಬಹುದು. ಯಾವುದೇ ಮಾಂಸದಿಂದ ಖಾಯಿಲೆ ಗುಣವಾಗುತ್ತದೆ ಅನ್ನೋದೆಲ್ಲ ಸುಳ್ಳು. ಗೋಮೂತ್ರ ಕುಡಿಯುವುದರಿಂದ ವಾಸಿಯಾಗುತ್ತೆ ಅನ್ನುವುದೆಲ್ಲ ಸುಳ್ಳು. ಮನೆ ಮದ್ದುಗಳು ಕೂಡಾ ಖಾಯಿಲೆಗಳನ್ನು ಸ್ವಲ್ಪ ದೂರ ಇಡಬಹುದು. ಶೀತ, ಕೆಮ್ಮನ್ನು ದೂರ ಇಡಬಹುದು ಎಂದರು. ಬೀಸೋದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಹಾಯಕ ಅಷ್ಟೆ ಎಂದರು.