ಬೆಂಗಳೂರು: ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ನಟ ಸೋನು ಸೂದ್ ನೇತೃತ್ವದ ಚಾರಿಟಬಲ್ ಟ್ರಸ್ಟ್, ರೈಲ್ವೆ ಪೊಲೀಸ್ ಸೇರಿದಂತೆ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ನಗರದಲ್ಲಿ ಪ್ರತಿದಿನ 5 ಸಾವಿರ ಜನರಿಗೆ ಊಟ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಫುಡ್ ಫ್ರಂ ಸೂದ್ ಹೆಸರಿನಲ್ಲಿ ಸೋನು ಸೂದ್ ಟ್ರಸ್ಟ್ ಪ್ರತಿದಿನ 5 ಸಾವಿರ ಜನರಿಗೆ ಅನ್ನ ನೀಡುವ ಕಾಯಕಕ್ಕೆ ಮುಂದಾಗಿದ್ದು, ಇದಕ್ಕೆ ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ಹಾಗೂ ರೈಲ್ವೆ ಪೊಲೀಸರ ನೆರವಿನೊಂದಿಗೆ ಮಾನವೀಯತೆ ಕಾರ್ಯದಲ್ಲಿ ತೊಡಗಿದೆ.
ಅಡುಗೆ ಸಿದ್ಧಪಡಿಸಲು ರಿಚ್ಮಂಡ್ ರಸ್ತೆಯಲ್ಲಿರುವ ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ಮಾಲೀಕರು ಸ್ಥಳಾವಕಾಶ ಕಲ್ಪಿಸಿದ್ದಾರೆ. ರಾಜಧಾನಿಯ ಆಸ್ಪತ್ರೆಗಳಲ್ಲಿ ಪ್ರಾಣವಾಯು ಕೊರತೆಯಿಂದ ಆತಂಕದಲ್ಲಿದ್ದ ಕೊರೊನಾ ಸೋಂಕಿತರಿಗೆ ರಾತ್ರೋ ರಾತ್ರಿ ಆಕ್ಸಿಜನ್ ತಲುಪಿಸಿ ರೋಗಿಗಳ ಪ್ರಾಣ ಕಾಪಾಡಿದ್ದ ಸೋನು ಸೂದ್ ಟ್ರಸ್ಟ್ ಸದಸ್ಯರು ಸಾವಿರಾರು ಜನರಿಗೆ ಹೊಟ್ಟೆ ತುಂಬಿಸುವ ಮಾನವೀಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರತಿದಿನ ಸುಮಾರು 150 ಕೆ.ಜಿ ರೈಸ್ ಬಾತ್ ತಯಾರಿಸಿ ಆಹಾರ ಪೊಟ್ಟಣ ಮೂಲಕ ನಗರದ ವಿವಿಧ ಸ್ಲಂ ಜನರಿಗೆ ಆಹಾರ ವಿತರಿಸಲಾಗುತ್ತಿದೆ. ಲಾಕ್ಡೌನ್ ವೇಳೆ ಅದೆಷ್ಟು ಜನರು ಎರಡು ಹೊತ್ತಿನ ಅನ್ನ ಸಿಗದೇ ಪರಿತಪಿಸುವಂತಾಗಿದೆ. ನಿತ್ಯ ಐದು ಸಾವಿರ ಆಹಾರ ಪೊಟ್ಟಣ ಹಂಚುತ್ತಿರುವುದು ಕಡಿಮೆ ಎಂದರೆ ತಪ್ಪಾಗುವುದಿಲ್ಲ. ಹಲವು ಸಂಘ - ಸಂಸ್ಥೆಗಳು ಇಂತಹ ಅನ್ನ ದಾಸೋಹ ನಡೆಸಿದರೆ ಹಸಿವಿನಿಂದ ಬಳಲುವವರ ಸಂಖ್ಯೆ ಕಡಿಮೆಯಾಗಲಿದೆ ಎನ್ನುತ್ತಾರೆ ಬೀಜಿಂಗ್ ಬೈಟ್ಸ್ ರೆಸ್ಟೋರೆಂಟ್ ಇಬ್ರಾಹಿಂ.