ಬೆಂಗಳೂರು : ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಇನ್ ಫ್ಯಾಂಟ್ರಿ ರಸ್ತೆಯ ನಂ.4, 5, ಮತ್ತು 6ರ ನಿವೇಶನದಲ್ಲಿ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅದೇ ಸ್ಥಳದಲ್ಲಿ ಶಿಲಾನ್ಯಾಸದ ಫಲಕವನ್ನೂ ಸಚಿವರು ಅನಾವರಣ ಮಾಡಿದರು.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾಕ್ಷೇತ್ರದ ಸಂಸತ್ ಸದಸ್ಯ ಪಿ ಸಿ ಮೋಹನ್ ಕೇಂದ್ರ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್, ಸಿಬಿಡಿಟಿಯ ಅಧ್ಯಕ್ಷ ಜೆ ಬಿ ಮೊಹಾಪಾತ್ರ ಮತ್ತು ಸಿಬಿಐಸಿಯ ಅಧ್ಯಕ್ಷ ಎಂ ಅಜಿತ್ ಕುಮಾರ್ ಅವರೂ ಉಪಸ್ಥಿತರಿದ್ದರು.
ಇಲ್ಲಿ ನಿರ್ಮಾಣವಾಗಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡವು ನೆಲಮಹಡಿ ಮತ್ತು 18 ಮಹಡಿಗಳನ್ನು ಮತ್ತು ನೆಲಮಾಳಿಗೆಯಲ್ಲಿ ವಾಹನ ನಿಲುಗಡೆಯ ಸೌಲಭ್ಯ ಒಳಗೊಂಡಿರಲಿದೆ. ಕಟ್ಟಡವು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳುತ್ತದೆ ಮತ್ತು ಗೃಹ ಶ್ರೇಯಾಂಕ IV ಅನುಗುಣವಾಗಿರುತ್ತದೆ.
ಈ ಕಟ್ಟಡದಲ್ಲಿ ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ ವಿನ್ಯಾಸಿತವಾಗಿದೆ. ಎರಡು ಕೊಳಾಯಿ ವ್ಯವಸ್ಥೆಯೊಂದಿಗೆ ಮರುಬಳಕೆಯ ನೀರನ್ನು ಕೈತೋಟಕ್ಕೆ ಬಳಸಲಾಗುತ್ತದೆ.
ಮ್ಯಾಗ್ನೆಟಿಕ್ ಫಿಲ್ಟರ್ ಸಹಿತವಾದ ಕೇಂದ್ರೀಕೃತ ವಾಯು ಸ್ವಚ್ಛತೆ ವ್ಯವಸ್ಥೆ ಮತ್ತು ಯುವಿ-ಕಿರಣ ಕ್ರಿಮಿನಾಶಕವನ್ನು ಒಳಗೊಂಡಿದೆ. ಕಟ್ಟಡವನ್ನು ಸಿಪಿಡಬ್ಲ್ಯುಡಿಯ ಬೆಂಗಳೂರು ಯೋಜನಾ ವೃತ್ತ ನಿರ್ಮಿಸಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುಸಜ್ಜಿತ ಕಟ್ಟಡದಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆದ್ಯತೆಯ ಮೇಲೆ ನಿವಾರಿಸಲು ಪ್ರತ್ಯೇಕವಾದ ಸಾರ್ವಜನಿಕ ಸಂಪರ್ಕ ಕಚೇರಿ ಮತ್ತು ತೆರಿಗೆ ಪಾವತಿದಾರರಿಗೆ ಸರದಿಗಾಗಿ ಕಾದು ಕುಳಿತುಕೊಳ್ಳುವ ಆವರಣವೂ ಇರುತ್ತದೆ.
ಇದು ಯಾವುದೇ ತೊಡಕು ರಹಿತ ತೆರಿಗೆದಾರರ ಸೇವೆಗಳನ್ನು ಒದಗಿಸಲು ಆದಾಯಕರ ಸೇವಾ ಕೇಂದ್ರವನ್ನು ಹೊಂದಿರುತ್ತದೆ. ಕೇಂದ್ರ ಸ್ಥಾನದಲ್ಲಿರುವ ಈ ಕಚೇರಿ ಕಟ್ಟಡವು ತೆರಿಗೆದಾರ ಸ್ನೇಹಿಯಾಗಿದೆ. ಕಟ್ಟಡದ ವಿನ್ಯಾಸ ಮತ್ತು ಜಾಗದ ಹಂಚಿಕೆಯು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲಕರವಾದ ಕಾರ್ಯ ವಾತಾವರಣವನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿಕ್ರಿಯೆಗೆ ನಿರ್ಮಲಾ ಸೀತಾರಾಮನ್ ನಕಾರ : ಕಾರ್ಯಕ್ರಮದಲ್ಲಿ ಭಾಗಿಯಾದ ನಿರ್ಮಲಾ ಸೀತರಾಮನ್, ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದರು. ಗ್ಯಾಸ್, ಪೆಟ್ರೋಲ್ ದರ ಹೆಚ್ಚಳದ ವಿಷಯಗಳನ್ನು ಪ್ರತ್ರಕರ್ತರು ಪ್ರಸ್ತಾಪಿಸಿದರೂ ಅದನ್ನು ಕೇಳಿಸಿಕೊಳ್ಳದ ಹಾಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅಲ್ಲಿಂದ ನಿರ್ಗಮಿಸಿದರು.