ಬೆಂಗಳೂರು: ನಗರದ ವಿವಿಧೆಡೆ ಕಾಂಗ್ರೆಸ್ ನಾಯಕರು ಇಂದು ಬಿಜೆಪಿ ವಿರುದ್ಧ ಕಿವಿ ಮೇಲೆ ಹೂ ಅಭಿಯಾನ ನಡೆಸಿದ್ದಾರೆ. ನಗರದ ಹಲವೆಡೆ ಬಿಜೆಪಿ ಸರ್ಕಾರದ ಸಾಧನೆ ವಿವರಿಸುವ ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಪೇಂಟಿಂಗ್ ಕೂಡ ಮಾಡಿಸಲಾಗಿದೆ. ಇಂತಹ ಪೋಸ್ಟರ್ ಹಾಗೂ ಸ್ಥಳವನ್ನು ಹುಡುಕಿ ಗುರಿಯಾಗಿಸಿದ ಕಾಂಗ್ರೆಸ್ ಮುಖಂಡರು ಅದರ ಮೇಲೆ ಕಿವಿ ಮೇಲೆ ಹೂವಿರುವ ವ್ಯಕ್ತಿಯ ಮುಖದ ಚಿತ್ರವನ್ನು ಅಂಟಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಕಾರ್ಯ ಮಾಡುತ್ತಿದೆ. ಬಜೆಟ್ ಹೆಸರಿನಲ್ಲಿ ಕೇವಲ ಆಶಾಗೋಪುರ ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ಜರಿದಿದ್ದಾರೆ.
ನಿನ್ನೆ ಬಜೆಟ್ ಮಂಡನೆ ಸಂದರ್ಭದಲ್ಲಿ ಉಬಯ ಸದನಗಳಲ್ಲಿಯೂ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಚೆಂಡು ಹೂ ಧರಿಸಿ ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧಾನಸೌಧ ಹೊರಗೂ ಧರಿಸಿಕೊಂಡೇ ಆಗಮಿಸಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ನಿನ್ನೆ ಸದನದಲ್ಲಿ ಹೂ ಮುಡಿದು ಹೋರಾಟದ ಹೊಸ ಸ್ವರೂಪ ತೋರಿಸಿದ್ದ ಕಾಂಗ್ರೆಸ್ ಇಂದು ಬೆಳಗ್ಗಿನಿಂದ ಬೇರೊಂದು ವಿಧದ ಅಭಿಯಾನಕ್ಕೆ ಚಾಲನೆ ನೀಡಿತು. ಇಂದು ಬೆಳಗ್ಗೆ ಕಿವಿ ಮೇಲೆ ಹೂವ ಎಂಬ ಪೋಸ್ಟರ್ ಅಭಿಯಾನ ಶುರುಮಾಡಿದ್ದು, ನಗರದ ವಿವಿಧೆಡೆ ಬಿಜೆಪಿ ಸಾಧನೆ ವಿವರಿಸುವ ಪೋಸ್ಟರ್ಗಳ ಮೇಲೆ ಈ ಕಿವಿಮೇಲೆ ಹೂವ ಚಿತ್ರ ರಾರಾಜಿಸಿತು.
ರಾತ್ರಿಯಿಡೀ ಸಂಚರಿಸಿ ತಮ್ಮ ಕೈಚಳಕ ತೋರಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾಗುವುದರೊಳಗೆ ನಗರದ ವಿವಿಧೆಡೆ ಓಡಾಡಿ ಕಿವಿ ಮೇಲೆ ಹೂವ ಚಿತ್ರ ಅಂಟಿಸಿದ್ದರು. ಬೆಳಗ್ಗಿನಿಂದ ಇನ್ನೂ ಕೆಲವಡೆ ಯುವ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಚಿತ್ರ ಅಂಟಿಸುವ ಕಾರ್ಯ ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ನಗರದ ವಿವಿಧೆಡೆ ಕಿವಿ ಮೇಲೆ ಹೂವು ಇರುವ ಚಿತ್ರ ಅಂಟಿಸುವ ಕಾರ್ಯ ಮಾಡಿದ್ದಾರೆ. ಮಧ್ಯಾಹ್ನದ ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನಗರದಲ್ಲಿ ಸಾರ್ವಜನಿಕರಿಗೆ ಹೂವನ್ನು ನೀಡುವ ಮೂಲಕ ಕಿವಿ ಮೇಲೆ ಹೂವು ಅಭಿಯಾನ ಆಚರಿಸಿದ್ದಾರೆ.
ಒಟ್ಟಾರೆ ನಗರದಲ್ಲಿ ಬಿಜೆಪಿಯೇ ಭರವಸೆ ಎಂದು ಪೋಸ್ಟರ್ ಅಂಟಿಸಿದ್ದ ರಾಜ್ಯ ಬಿಜೆಪಿ ನಾಯಕರ ಜಾಹೀರಾತು ಪೋಸ್ಟರ್ ಮೇಲೆ ಕಿವಿ ಮೇಲೆ ಹೂವು ಬಂದು ಕುಳಿತಿದ್ದು ವಿಪರ್ಯಾಸ. ಭರವಸೆ, ಭರವಸೆ ಬುರುಡೆ ಭರವಸೆ ಎಂದು ವ್ಯಂಗ್ಯವಾಡಲಾಗಿದೆ. 'ಸಾಕಪ್ಪಾ ಸಾಕು ಕಿವಿ ಮೇಲೆ ಹೂವ' ಎಂದು ಪೋಸ್ಟರ್ನಲ್ಲಿ ಉಲ್ಲೇಖ ಮಾಡಲಾಗಿದೆ. ಪೇ ಸಿಎಂ ಅಭಿಯಾನದ ಭರ್ಜರಿ ಯಶಸ್ಸಿನ ಬಳಿಕ ಕಾಂಗ್ರೆಸ್ ಅದರ ಯಶಸ್ಸಿನ ಅಲೆಯಲ್ಲೇ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಹಂತದಲ್ಲಿ ಬಿಜೆಪಿ ಸರ್ಕಾರದ ಸಾಧನೆಯ ಪೋಸ್ಟರ್ ಮೇಲೆ ಬೇರೆ ಪೋಸ್ಟರ್ ಅಳವಡಿಸಿ ಲೇವಡಿ ಮಾಡಿತ್ತು.
ಇದೀಗ ಯಶಸ್ವಿಯಾಗಿ ಎಲ್ಲೆಡೆ ಕಿವಿ ಮೇಲೆ ಹೂ ಅಭಿಯಾನ ಮಾಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ತೀವ್ರಗೊಳ್ಳುತ್ತಿದ್ದು, ಸರ್ಕಾರ ಜನರಿಗಾಗಿ ಏನನ್ನೂ ಮಾಡಿಲ್ಲ ಎಂಬ ಸಂದೇಶವನ್ನು ಸಾರುವ ಕಾರ್ಯ ಮಾಡುತ್ತಿದೆ. ಇದಕ್ಕೆ ಒಂದೊಂದೇ ವಿನೂತನ ಮಾರ್ಗವನ್ನು ಹುಡುಕಿ ಜನರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಡಿಕೆಶಿ ಕಿವಿಯಿಂದ ಚೆಂಡು ಹೂವು ತೆಗೆದ ಬಿಎಸ್ವೈ: ವಿಡಿಯೋ