ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ - ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬೆಂಗಳೂರಿನ ಮಹದೇವಪುರ ಮತ್ತು ಕೆ.ಆರ್.ಪುರದಲ್ಲಿ ವರುಣ ಅರ್ಭಟದಿಂದಾಗಿ ಜನರು ಜಾಗರಣೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತ್ತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಮಳೆರಾಯ ಕೊಂಚ ವಿರಾಮ ನೀಡಿದ್ದು ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ನೀರಿನ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ.
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ ಸಂಪೂರ್ಣ ನದಿಯಂತಾಗಿದೆ. ಮಹದೇವಪುರ ಕ್ಷೇತ್ರದ ಸರ್ಜಾಪುರ ರಸ್ತೆಯ ರೈನ್ ಬೋ ಲೇಔಟ್ ಹಾಗೂ ಕಂಟ್ರಿ ಸೈಡ್ ಸೇರಿದಂತೆ ಹಲವು ಲೇಔಟ್ಗಳು ಮುಳುಗಡೆ ಆಗಿದ್ದು, ಬಹುತೇಕ ಎಲ್ಲ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ತೆರಳಿದ್ದಾರೆ.
ಮಳೆ ವಿರಾಮನೀಡಿದಕ್ಕೆ ರಸ್ತೆಯಲ್ಲಿದ್ದ ಸಂಪೂರ್ಣ ನೀರು ಖಾಲಿ ಖಾಲಿ ಆಗಿದ್ದು, ಲೇಔಟ್ ಗಳಲ್ಲಿ ಮಾತ್ರ ಹೆಚ್ಚಿನ ನೀರು ಹಾಗೆ ಉಳಿದಿವೆ. ಹೀಗಾಗಿ ಮಳೆ ಕೊಂಚ ಬಿಡುವು ಕೊಟ್ಟಿರುವ ಹಿನ್ನೆಲೆ ನಿವಾಸಿಗಳು ಕೈಯಲ್ಲಿ ಲಗೇಜ್ ಹಿಡಿದು ತಮ್ಮ ಮನೆಗಳತ್ತ ವಾಪಸ್ ಹೊಗುತ್ತಿದ್ದಾರೆ.
ಹೊರಮಾವು ಸಾಯಿ ಬಡಾವಣೆಯಲ್ಲಿ ತಗ್ಗಿದ ನೀರು: ನಗರದಲ್ಲಿ ಪ್ರತಿಭಾರಿ ಮಳೆ ಬಂದಾಗ ಹೆಚ್ಚಾಗಿ ಮಳೆ ಹಾನಿಗೆ ಗುರಿಯಾಗುವುದು ಕ್ಷೇತ್ರದ ಹೊರಮಾವು ವಾರ್ಡ್ನ ಸಾಯಿಬಡಾವಣೆ. ನಗರದಲ್ಲಿ ಬಾರಿ ಮಳೆಯಾದರೆ ಸಾಯಿ ಬಡಾವಣೆ ಕೆರೆಯಾಗಿ ಮಾರ್ಪಡಾಗುತ್ತದೆ, ಕಳೆದ ಮೂರು ದಿನಗಳಿಂದ ನೆರೆ ಸಮಸ್ಯೆ ಉಂಟಾಗಿದ್ದ ಸಾಯಿ ಬಡಾವಣೆಯಲ್ಲಿ ಇಂದು ನೀರಿನ ಪ್ರಮಾಣ ತಗ್ಗಿದ್ದು,ಸ್ವಚ್ಚತಾ ಕಾರ್ಯದಲ್ಲಿ ನಿವಾಸಿಗಳು ಮಗ್ನರಾಗಿದ್ದಾರೆ.
ವೈಟ್ ಫೀಲ್ಡ್ ,ಬೆಳ್ಳಂದೂರು, ಸರ್ಜಾಪುರ ಲೇಔಟ್ ಗಳಲ್ಲಿ ತಗ್ಗದ ನೀರು: ವೈಟ್ ಫೀಲ್ಡ್, ಬೆಳ್ಳಂದೂರು, ಸರ್ಜಾಪುರ ಪ್ರದೇಶಗಳಲ್ಲಿ ಹಲವು ಲೇಔಟ್ ಮತ್ತು ವಿಲ್ಲಾಗಳಲ್ಲಿ ಮಳೆ ನೀರು ನಾಲ್ಕು ಐದು ಅಡಿಗಳಷ್ಟು ತುಂಬಿದ್ದು ನಿವಾಸಿಗಳು ಮನೆ ಬಿಟ್ಟು ಲಾಡ್ಜ್ ಗಳಲ್ಲಿ ವಾಸ ಮಾಡುತ್ತಿದ್ದಾರೆ.
ನಿನ್ನೆ ಮಂಗಳವಾರ ಮಹದೇವಪುರ ಭಾಗದಲ್ಲಿ ಮಳೆ ಆಗದ ಕಾರಣ ರಸ್ತೆಗಳಲ್ಲಿ ಹರಿಯುತ್ತಿದ್ದ ನೀರು ಕಡಿಮೆ ಆಗಿದೆ. ವಾಹನ ಸವಾರರು ನಿರಾಳವಾಗಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಸೇತುವೆ ಮುಳುಗಡೆ.. ಜೆಸಿಬಿಯಲ್ಲಿ ಸಾಗಿದ ವಿದ್ಯಾರ್ಥಿಗಳು