ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ 'ಉಗುಳುವುದನ್ನು ನಿಲ್ಲಿಸಿ' (ಸ್ಟಾಪ್ ಸ್ಪಿಟ್ಟಿಂಗ್) ಎಂಬ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಈ ಜಾತಾ ಬಿಬಿಎಂಪಿ, ರೋಟರಿ, ನಮ್ಮ ಬೆಂಗಳೂರು ಫೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಮೊದಲಾದ ಇಪ್ಪತ್ತು ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ.
ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಂದೀಪ್ ಅವರು, ಆಂಟಿ ಸ್ಪಿಟ್ ಕಾಂಪೇನ್ಗೆ ಚಾಲನೆ ನೀಡಲಾಗಿದೆ. 20 ಸಂಘ-ಸಂಸ್ಥೆಗಳು ಪಾಲಿಕೆ ಜೊತೆ ಕೈಜೋಡಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧ. ಇದರಿಂದ ಕೋವಿಡ್ ಸೇರಿ ಇತರೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ನಗರವನ್ನು ಸ್ವಚ್ಛ ಸರ್ವೇಕ್ಷಣ ಸರ್ವೇಯಲ್ಲಿ ಹೆಚ್ಚು ಅಂಕ ಪಡೆಯುವಂತೆ ಮಾಡಲು ಇದು ಅಗತ್ಯವಾಗಿದೆ ಎಂದರು.
ಸಾರ್ವಜನಿಕರ ಸ್ಥಳಗಳಲ್ಲಿ ಉಗಿದಾಗ ಅಲ್ಲಿ ಸ್ವಚ್ಛತೆ ಹಾಳಾಗುವುದರ ಜೊತೆಗೆ ಕಾಯಿಲೆಗಳ ಹರಡುವಿಕೆಗೂ ಕಾರಣ ಆಗುತ್ತದೆ. ಇದರಿಂದ ನಗರದ ಸೌಂದರ್ಯ ಹಾಳಾಗಲಿದೆ. ಈ ನಿಟ್ಟಿನಲ್ಲಿ ಎಲ್ಲೂ ಉಗುಳ ಬಾರದೆಂಬುದರ ಬಗ್ಗೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ ಎಂದರು.
ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಬೈಲಾನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಬಹುದಾಗಿದೆ. ಸದ್ಯ ಕೋವಿಡ್ ಇರುವ ಹಿನ್ನೆಲೆ ಮಾರ್ಷಲ್‌ಗಳು ಮಾಸ್ಕ್ ಧರಿಸದಿರುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರಿಗೆ ದಂಡ ವಿಧಿಸುತ್ತಿದ್ದು, ಅವರು ಸಹ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.