ಬೆಂಗಳೂರು: ಮತದಾರರ ಪರಿಷ್ಕರಣೆ ಅಕ್ರಮ ಪ್ರಕರಣ ಸಂಬಂಧ ಕೇಂದ್ರ ವಿಭಾಗದ ಹಲಸೂರು ಗೇಟ್ ಪೊಲೀಸರು ಶನಿವಾರ ನಾಲ್ವರು ಆರ್‌ಒಗಳು ಹಾಗೂ ಚಿಲುಮೆ ಸಂಸ್ಥೆ ಸಿಬ್ಬಂದಿ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹದೇವಪುರ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್, ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್ ಅಹ್ಮದ್, ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ. ಭೀಮಾಶಂಕರ್, ಆರ್.ಆರ್. ಕ್ಷೇತ್ರದ ಅಧಿಕಾರಿ ಮಹೇಶ್ ಹಾಗೂ ಚಿಲುಮೆ ಸಂಸ್ಥೆ ಸಿಬ್ಬಂದಿ ಶಿವಕುಮಾರ್ ಎಂಬುವರು ಬಂಧಿತರು.
ಶಿವಕುಮಾರ್ ಚಿಲುಮೆ ಸಂಸ್ಥೆ ನೌಕರನಾಗಿದ್ದು, ಬಿಬಿಎಂಪಿ ಹಾಗೂ ಚಿಲುಮೆ ಸಂಸ್ಥೆ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದ. ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ) ಗುರುತಿನ ಚೀಟಿಗಳನ್ನು ಬಿಬಿಎಂಪಿ ಕಡೆಯಿಂದ ಸಂಸ್ಥೆ ನೌಕರರು ಹಾಗೂ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದವರಿಗೆ ಕೊಡಿಸುತ್ತಿದ್ದರು.
ಜೊತೆಗೆ ಸಂಸ್ಥೆ ಪರವಾಗಿ ಬಿಬಿಎಂಪಿ ಅಧಿಕಾರಿಗಳಿಂದ ಮತಪಟ್ಟಿ ಪಡೆಯಲು ಹಾಗೂ ಸಮೀಕ್ಷೆಗೆ ಸಹಿ ಪಡೆಯುತ್ತಿದ್ದರು. ಸದ್ಯ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರ್‌ಒಗಳ ವಿಚಾರಣೆ: ಚಿಲುಮೆ ಸಂಸ್ಥೆ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಬಿಬಿಎಂಪಿ ಕಂದಾಯ ವಿಭಾಗದ ನಾಲ್ವರು ಆರ್‌ಒಗಳನ್ನು ಬಂಧಿಸಲಾಗಿದೆ. ಆರ್‌ಒಗಳಿಗೆ ಬಿಎಲ್‌ಒ ಗುರುತಿನ ಚೀಟಿ ನೀಡಲು ಅವಕಾಶವಿಲ್ಲ. ಆದರೂ ಅಕ್ರಮವಾಗಿ ಚಿಲುಮೆ ಸಂಸ್ಥೆ ಪರವಾಗಿ ಬರುವ ವ್ಯಕ್ತಿಗಳಿಗೆ ಆರ್‌ಒ ಕಾರ್ಡ್‌ಗಳನ್ನು ನೀಡುತ್ತಿದ್ದರು ಎಂಬ ಆರೋಪವಿದೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಬಂಧನವಾಗಿದ್ದ 6 ಮಂದಿ: ಪ್ರಕರಣ ಸಂಬಂಧ ಈಗಾಗಲೇ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಆತನ ಸಹೋದರ ಕೃಷ್ಣೇಗೌಡ, ಸಿಬ್ಬಂದಿ ಮಾರುತಿ, ಧರ್ಮೇಶ್, ರೇಣುಕಾಪ್ರಸಾದ್, ಲೋಕೇಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮತ ಪರಿಷ್ಕರಣೆ ಅಕ್ರಮ: ಇಬ್ಬರು ಅಧಿಕಾರಿಗಳ ಅಮಾನತಿಗೆ ಚುನಾವಣೆ ಆಯೋಗದಿಂದ ಖಡಕ್ ನಿರ್ದೇಶನ