ಯಲಹಂಕ(ಬೆಂಗಳೂರು): ದರೋಡೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ ಬಳಿಯ ಫ್ಯಾಕ್ಟರಿಗೆ ನುಗ್ಗಿದ್ದ ಐವರು ಅಪರಿಚಿತರು ಮಾರಕಾಸ್ತ್ರ ತೋರಿಸಿ ಕಾರ್ಮಿಕರಿಂದ ಎಂಟೂವರೆ ಸಾವಿರ ರೂ ಹಣ ಮತ್ತು ಐದು ಮೊಬೈಲ್‌ಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೆವು. ತನಿಖೆಯನ್ನು ನಡೆಸಿದ ಇನ್ಸ್‌ಪೆಕ್ಷರ್ ಮುರುಳೀಧರ್ ಅವರ ತಂಡ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಬಂಧಿತ ಐವರಲ್ಲಿ ನಾಲ್ವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು" ಎಂದು ತಿಳಿಸಿದರು.
"ಆರೋಪಿಗಳು ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರು. ಇದರಲ್ಲಿ ಒಬ್ಬ ಬಾಲಕ ತನ್ನ 14 ವಯಸ್ಸಿನಿಂದ ದರೋಡೆ, ಮನೆಗಳ್ಳತನ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಈತನ ಮೇಲೆ ಬೆಂಗಳೂರು ನಗರ, ರಾಮನಗರ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ. ಎಲ್ಲರನ್ನೂ ಹೆಚ್ಚಿನ ತನಿಖೆಗೆ ವಶಕ್ಕೆ ಪಡೆದುಕೊಂಡಿದ್ದೇವೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದೇವೆ. ಆರೋಪಿಗಳ ಬಂಧನದಿಂದ 10 ಕೇಸ್ಗಳು ಪತ್ತೆಯಾಗಿದೆ. ಒಂದು ಬೈಕ್, 12 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದರು.
ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಾಲ್ವರ ಬಂಧನ: ಗಾಂಜಾ ಪ್ರಕರಣ ಸಂಬಂಧ ನಾಲ್ವರು ಆರೋಪಿಯನ್ನು ಬಂಧಿಸಿ, 1 ಕೆ.ಜಿ 250 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯುವುವಲ್ಲಿ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ನವೀನ್, ಅನಿಲ್, ಕಾರ್ತಿಕ್, ಮಂಜು ಬಂಧಿತರು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, "ಬೆಂಗಳೂರು-ತುಮಕೂರು ಹೈವೇಯಲ್ಲಿ ಪುಂಡರು ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಸಂಬಂಧ ಸಿಸಿಟಿವಿ ಪರಿಶೀಲಿಸಿ ನಾಲ್ವರನ್ನು ಪತ್ತೆ ಹಚ್ಚಿ, ಅವರನ್ನು ವಶಕ್ಕೆ ಪಡೆದುಕೊಳ್ಳುವ ವೇಳೆ ಅವರು ಗಾಂಜಾ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರು ಎರಡು ಕದ್ದ ಬೈಕ್ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಮಧ್ಯರಾತ್ರಿಯಲ್ಲಿ ಉತ್ತರ ಭಾರತ ಕಾರ್ಮಿಕರನ್ನು ಅಡ್ಡಗಟ್ಟಿ ಅವರಿಂದ ಹಣ, ಮೊಬೈಲ್ ಸುಲಿಗೆ ಮಾಡಿದ ಪ್ರಕರಣಗಳು ಪತ್ತೆಯಾಗಿದ್ದವು. ಈ ಪ್ರಕರಣಗಳಲ್ಲಿಯೂ ಆರೋಪಿಗಳು ಭಾಗಿಯಾಗಿರುವುದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೇರಳ ಉದ್ಯಮಿ ಹನಿಟ್ರ್ಯಾಪ್ ಪ್ರಕರಣ: ಮೈಸೂರು ಪೊಲೀಸರಿಂದ ಯುವತಿ ಸೇರಿ ಮೂವರ ಬಂಧನ