ಬೆಂಗಳೂರು : ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಹೆಣ್ಣೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಹ್ಮದ್ ಮುಸ್ತಫಾ(25) ಥಣಿಸಂದ್ರ,ಸಹೇಲ್ ಪಾಷಾ-(30)ಅಶ್ವತ್ಥನಗರ,ಅನ್ಸರ್ ಜಬ್ಬಾರ್(35) ಸಾರಾಯಿಪಾಳ್ಯ, ಸರ್ಫರಾಜ್ (38)ಸಾರಾಯಿಪಾಳ್ಯ, ಬಂಧಿತ ಆರೋಪಿಗಳು.
ಈ ಕುರಿತು ನಗರ ಆಯುಕ್ತ ಭಾಸ್ಕರ್ ರಾವ್ ಮಾತಾಡಿ, ಈ ಪ್ರಕರಣ ಕುರಿತಂತೆ ಇನ್ವೆಸ್ಟಿಗೇಷನ್ ಮಾಡಲಾಗುತ್ತಿದೆ. ಸದ್ಯ ಐವರ ಬಂಧನವಾಗಿದೆ. ಹಾಗೂ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 188, 504, 143, 149 ಅಡಿ ಪ್ರಕರಣ ದಾಖಲಾಗಿದೆ. ಯಾರೂ ಮಾಹಿತಿ ಸರಿಯಾಗಿ ಪಡೆಯದೆ ಆವೇಶಕ್ಕೆ ಒಳಗಾಗಬೇಡಿ. ವೈದ್ಯರು ನಮ್ಮ ಸೇವೆಗಳಿಗೆ ನಿಂತಿದ್ದಾರೆ ಸಹಕರಿಸಿ. ಹಾಗೆ ಆರೋಗ್ಯ ಇಲಾಖೆಯಿಂದ ಯಾರೇ ಸೇವೆ ಸಲ್ಲಿಸಲು ತೆರಳುವಾಗ ಪೊಲೀಸರ ಸಹಕಾರ ಕೇಳಿ ಎಂದರು.
ಪ್ರಕರಣದ ಹಿನ್ನೆಲೆ :
ಆರೋಗ್ಯ ಇಲಾಖೆ ಸೂಚನೆ ಮೇರೆಗೆ ನರ್ಸ್‌ಗಳು ಹಾಗೂ ಆಶಾ ಕಾರ್ಯಕರ್ತೆಯರು ಕಳೆದ 15 ದಿನಗಳಿಂದ ಕೆಮ್ಮು, ಜ್ವರ, ನೆಗಡಿ ಕುರಿತಂತೆ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದರು. ಇದೇ ರೀತಿ ಹೆಗಡೆನಗರ ಸಮೀಪದ ಲೇಔಟ್‌ವೊಂದರ ಬಳಿ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಎಂಬುವರು ಸಮೀಕ್ಷೆ ನಡಸುತ್ತಿದ್ದಾಗ ಯಾಕೆ ಈ ಸಮೀಕ್ಷೆ ಮಾಡುತ್ತಿದ್ದೀರಾ? ನಮಗೆ ಯಾವ ಕಾಯಿಲೆಯೂ ಇಲ್ಲ ಎಂದು ಗದರಿಸಿ ಕೈಯಲ್ಲಿದ್ದ ರಿಪೋರ್ಟ್ ಹರಿದು ಹಾಕಿದ್ದಲ್ಲದೇ, ಮೊಬೈಲ್ ಕಸಿದು ಅಸಭ್ಯ ವರ್ತನೆ ತೋರಿದ್ದರು ಎಂದು ಆರೋಪಿಸಲಾಗಿತ್ತು.
ಘಟನೆ ಸಂಬಂಧ ಕೃಷ್ಣವೇಣಿ ವಿಡಿಯೋ ಮಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಆಧರಿಸಿ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಸಹ ಆಶಾ ಕಾರ್ಯಕರ್ತೆ ಮನೆಗೆ ಬಂದು ಅವರನ್ನು ಸಂತೈಸಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿ ಮುನಿರಾಜು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಪೊಲೀಸರು, ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.