ಬೆಂಗಳೂರು: ರಾಯಚೂರಿನ 5 ವರ್ಷದ ಬಾಲಕಿಗೆ ಝಿಕಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದು ರಾಜ್ಯದ ಮೊದಲ ಝಿಕಾ ಪ್ರಕರಣವಾಗಿದ್ದು, ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಆರೋಗ್ಯಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮೊದಲ ಝಿಕಾ ವೈರಾಣು ಕಂಡುಬಂದಿರುವುದಾಗಿ ಪುಣೆ ಲ್ಯಾಬ್ನಿಂದ ವರದಿ ಬಂದಿದೆ. ಡಿಸೆಂಬರ್ 5ರಂದು ಮಾದರಿ ಪಡೆಯಲಾಗಿತ್ತು. 8ರಂದು ನಮಗೆ ಲ್ಯಾಬ್ನವರು ವರದಿ ನೀಡಿದ್ದಾರೆ. ನಾವು ಒಟ್ಟು ಮೂರು ಮಾದರಿ ಕಳುಹಿಸಿದ್ದು ಅದರಲ್ಲಿ ಎರಡು ನೆಗಟಿವ್, ಒಂದು ಪಾಸಿಟಿವ್ ಬಂದಿದೆ. ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್ ಬಂದಿದೆ. ಅಲ್ಲಿ ಈಗಾಗಲೇ ದೊಡ್ಡಮಟ್ಟದಲ್ಲಿ ನಿಗಾ ಇರಿಸಿದ್ದೇವೆ, ಹಾಗಾಗಿ ಯಾರೂ ಆತಂಕಪಡಬೇಕಿಲ್ಲ ಎಂದರು.
ಕೆಲ ತಿಂಗಳ ಹಿಂದೆ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶದಲ್ಲಿ ಝಿಕಾ ಕಂಡುಬಂದಿದೆ. ನಮ್ಮಲ್ಲಿ ಈಗ ಮೊದಲ ಪ್ರಕರಣ ಪತ್ತೆಯಾಗಿದೆ. ಡೆಂಗಿ, ಚಿಕನ್ ಗೂನ್ಯಾ ಪರೀಕ್ಷೆಗೆ ಒಳಪಡಿಸಲಾದ ಪರೀಕ್ಷೆಯ ಮಾದರಿಯನ್ನೇ ಪುಣೆಗೆ ಕಳುಹಿಸಲಾಗಿತ್ತು. ಅಲ್ಲಿನ ಲ್ಯಾಬ್ನಲ್ಲಿ ಝಿಕಾ ಪಾಸಿಟಿವ್ ಬಂದಿದೆ, ಎಚ್ಚರಿಕೆಯಿಂದ ಇರುವಂತೆ ರಾಯಚೂರು ಮತ್ತು ನೆರೆ ಜಿಲ್ಲೆಗಳಿಗೆ ಸೂಚಿಸಿದ್ದೇವೆ. ಈ ರೀತಿಯ ಸೋಂಕು ಕಂಡುಬಂದರೆ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಿ ಎಂದು ಸೂಚಿಸಲಾಗಿದೆ. ಸರ್ಕಾರವು ಬಹಳ ಎಚ್ಚರಿಕೆಯಿಂದ ಅವಲೋಕನ ಮಾಡುತ್ತಿದೆ ಎಂದು ಹೇಳಿದರು.
ಝಿಕಾ ವೈರಸ್ ಸೊಳ್ಳೆಯಿಂದ ಹರಡುತ್ತದೆ, ಹಾಗಾಗಿ ಜನರು ಸೊಳ್ಳೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈರಸ್ ಬಗ್ಗೆ ಇಂದೇ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಅದೇ ರೀತಿ ಈಗ ಇರುವ ಹವಾಮಾನ ವೈಪರೀತ್ಯ, ಚಂಡಮಾರುತ ಪರಿಣಾಮಕ್ಕೆ ಮುಂದಿನ ಮೂರು ತಿಂಗಳು ಯಾವ ರೀತಿ ಎಚ್ಚರವಹಿಸಬೇಕು. ಹಿರಿಯ ವಯಸ್ಸಿನವರು, ಮಧುಮೇಹ ಇರುವವರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ರಾಯಚೂರು: ಐದು ವರ್ಷದ ಬಾಲಕಿಯಲ್ಲಿ ಶಂಕಿತ ಝಿಕಾ ವೈರಸ್ ಪತ್ತೆ