ಬೆಂಗಳೂರು: ನಗರದಲ್ಲಿ ಮೊದಲ ಮೊಬೈಲ್ ಬಸ್ ನಿಲ್ದಾಣ ಅಂದರೆ ಸಂಚಾರಿ ಬಸ್ ನಿಲ್ದಾಣ ಕಾರ್ಯನಿರ್ವಹಿಸುತ್ತಿವೆ. 'ಅಲ್ಲಿ ಸೇರೋಣ' ಮಹಿಳಾ ಉಪಕ್ರಮದ ಅಡಿಯಲ್ಲಿ ಈ ಚಲಿಸುವ ಬಸ್ ನಿಲ್ದಾಣ ಆರಂಭವಾಗಿದೆ.
ಬೆಂಗಳೂರಿನ ಮೊದಲ ಮೊಬೈಲ್ ಬಸ್ ನಿಲ್ದಾಣ ಮೊಬಿಲಿಟಿಯ ಅಂತರವನ್ನು ನಿವಾರಿಸುವ ಉದ್ದೇಶ ಹೊಂದಿದ್ದು, ಅಸಂಘಟಿತ ವಲಯದ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂಬುದನ್ನು ತೋರಿಸುತ್ತಿದೆ. ಈ ಬಸ್ ನಿಲ್ದಾಣವು ಬೆಂಗಳೂರಿನ ಹೊಸ ನಗರ, ಸೀಗೆಹಳ್ಳಿ ಮತ್ತು ಬೈರಸಂದ್ರದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸಂಚರಿಸಲಿದೆ.
ಅಕ್ಟೋಬರ್ 7 ರವರೆಗೆ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಹಿಂಬದಿಯ ಹೊಸನಗರದಲ್ಲಿ ಸ್ಥಾಪನೆಯಾಗಿದ್ದು, ಅಲ್ಲಿಂದ ಅಕ್ಟೋಬರ್ 9 ಮತ್ತು 10 ರಂದು ಸೀಗೆಹಳ್ಳಿ ಮತ್ತು ಪ್ರಿಯಾಂಕ ನಗರ, ಅಕ್ಟೋಬರ್ 16 ರಿಂದ 18 ರಂದು ಗುರುವಾರ ಸಂತೆ ಪ್ರದೇಶ ಮತ್ತು ಅಕ್ಟೋಬರ್ 20 ರಿಂದ 21 ರಂದು ಬೈರಸಂದ್ರದಲ್ಲಿ ಇರಲಿದೆ.
ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್: ರಾಜ್ಯಕ್ಕೆ ಹೆಚ್ಚುವರಿಯಾಗಿ ಬೇಕಿದೆ 5,796 ಬಸ್ಗಳು!
ಸಾಮಾನ್ಯ ಬಸ್ ನಿಲ್ದಾಣದಂತೆಯೇ ಇರುವ ಈ ಅನುಸ್ಥಾಪನೆಯಲ್ಲಿ ಟಿಕೆಟ್ ಕೌಂಟರ್, ಸೀಟುಗಳು, ಕಾಯುವ ಸ್ಥಳ ಮತ್ತು ನ್ಯೂಸ್ ಸ್ಟಾಂಡ್ ಇದೆ. ಈ ಉಪಕ್ರಮದ ಮೂಲಕ ನಗರದ ಅಸಂಘಟಿತ ಉದ್ಯೋಗಿಗಳಿಗೆ ಫ್ಲಾಟ್ಫಾರಂ ಸೃಷ್ಟಿಸುತ್ತಿದ್ದೇವೆ. ಎಲ್ಲರಿಗೂ ಸುಧಾರಿತ ಸಾರಿಗೆ ಸೇವೆಗಳನ್ನು ಮತ್ತು ಇದರಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಿಸಲಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಸಮುದಾಯ ಸಂಯೋಜಕಿ ಬಿ.ಸುರೇಶಾ.ಕಾಂತಾ ತಿಳಿಸಿದ್ದಾರೆ.
ಈ ಬಗ್ಗೆ ವಿಜಯನಗರ ವೈಟ್ ಫೀಲ್ಡ್ನ ಮಹಿಳಾ ಪರ ಹೋರಾಟಗಾರ್ತಿ ಮತ್ತು ವೃತ್ತಿಯಲ್ಲಿ ಟೈಲರ್ ಆಗಿರುವ ಸುಜಾತ ಮಾತನಾಡಿ, "ನಮ್ಮದು ನಾಲ್ವರ ಕುಟುಂಬ. ನನ್ನ ಪತಿ, ಮಾವ ಮತ್ತು ನಾನು ದ್ವಿಚಕ್ರ ವಾಹನ ಬಳಸುತ್ತೇವೆ. ಪ್ರತಿಯೊಬ್ಬರೂ ವಾಹನ ಬಳಸುವುದು ಇಂಗಾಲದ ಹೊರಹೊಮ್ಮುವಿಕೆಯನ್ನು ಹೆಚ್ಚಿಸುತ್ತದೆ. 50 ರಿಂದ 60 ಜನರನ್ನು ಹೊತ್ತೊಯ್ಯುವ ಬಸ್ಗಳು ಇಂಗಾಲದ ಹೊರಹೊಮ್ಮುವಿಕೆ ಗಮನಾರ್ಹವಾಗಿ ಕಡಿಮೆ ಮಾಡುವುದಲ್ಲದೇ ಟ್ರಾಫಿಕ್ ಕಡಿಮೆ ಮಾಡುತ್ತದೆ. ಇದು ಪರಿಸರಕ್ಕೆ ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಉತ್ತಮ ಮಳೆ, ಹಸಿರು, ಸುಧಾರಿತ ಗಾಳಿಯ ಗುಣಮಟ್ಟ ದೊರೆಯುತ್ತದೆ" ಎಂದರು.