ಬೆಂಗಳೂರು: ಅಂತೂ ಇಂತೂ ಬಹು ಕಾತರದಿಂದ ಕಾದಿದ್ದ SSLC ಮೊದಲ ದಿನದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೋರ್ ವಿಷಯಗಳಾದ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ವಿಷಯಗಳಿಗೆ ಪರೀಕ್ಷೆ ಇಂದು ನಡೆಯಿತು. ಮೂರು ವಿಷಯಗಳನ್ನು ಸೇರಿಸಿ, 120 ಅಂಕಗಳಿಗೆ ಬಹುಆಯ್ಕೆ ಪ್ರಶ್ನೆಗಳನ್ನ ಕೇಳಲಾಗಿತ್ತು.
ನಗರದಲ್ಲಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗಳಲ್ಲಿ ನಿರಾಳತೆ ಕಾಣುತ್ತಿತ್ತು. ಪರೀಕ್ಷಾ ಕೊಠಡಿಯಿಂದ ಬಂದ ವಿದ್ಯಾರ್ಥಿಗಳು ಖುಷಿಯಿಂದ ತಮ್ಮ ಸ್ನೇಹಿತರಲ್ಲಿ ಪರೀಕ್ಷೆ ಕುರಿತು ಮಾಹಿತಿ ಹಂಚುಕೊಳ್ಳುತ್ತಿರುವುದು ಕಂಡುಬಂತು.
ಮೊದಲ ದಿನದ ಪರೀಕ್ಷೆಯ ಅನುಭವದ ಕುರಿತು ವಿದ್ಯಾರ್ಥಿನಿಯರು ಸಚಿವರೊಂದಿಗೆ ಮಾಹಿತಿ ಹಂಚಿಕೊಂಡರು. ಪರೀಕ್ಷೆಯು ಬಹಳ ಸುಲಭವಾಗಿತ್ತು, ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ, ಸ್ಯಾನಿಟೈಸ್ ವ್ಯವಸ್ಥೆ ಎಲ್ಲವೂ ಅತ್ಯುತ್ತಮವಾಗಿತ್ತು. ಯಾವುದೇ ಭಯವಿಲ್ಲದೇ ಪರೀಕ್ಷೆಯನ್ನ ಬರೆದಿದ್ದೇವೆ ಎಂದು ಖುಷಿ ಖೂಷಿಯಾಗಿ ಹೇಳಿಕೊಂಡರು.
ಮತ್ತೊಬ್ಬ ವಿದ್ಯಾರ್ಥಿನಿ ದೀಕ್ಷಿತಾ ಮಾತನಾಡಿ, ಪ್ರಶ್ನೆಗಳೆಲ್ಲವೂ ಸುಲಭವಾಗಿತ್ತು. ಗುರುವಾರ ನಡೆಯುವ ಪರೀಕ್ಷೆಗೂ ತಯಾರಿ ಮಾಡಿಕೊಂಡಿದ್ದೇವೆ. ಉತ್ತಮ ಅಂಕ ಗಳಿಸುವ ನಿರೀಕ್ಷೆ ಇದೆ ಎಂದರು.
ಪರೀಕ್ಷೆ ಚೆನ್ನಾಗಿ ಬರೆದ್ಯಾ..
ಸಾಕಷ್ಟು ವಿದ್ಯಾರ್ಥಿಗಳು 3 ಗಂಟೆಗಳ ಪರೀಕ್ಷೆಯನ್ನು 2 ಗಂಟೆಯಲ್ಲೇ ಬರೆದು ಮುಗಿಸಿ ಕುಳಿತಿದ್ದರು. ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟ ಶಿಕ್ಷಣ ಸಚಿವ ಸುರೇಶ್ಕುಮಾರ್ ಮೆಲು ಧ್ವನಿಯಲ್ಲೇ ವಿದ್ಯಾರ್ಥಿಗಳನ್ನು ಮಾತನಾಡಿಸಿ, ಪರೀಕ್ಷೆ ಆಗೋಯ್ತಾ? ಚೆನ್ನಾಗಿ ಬರೆದ್ಯಾ? ಎಂದು ಕೇಳಿದ್ರು. ಅವಧಿಗೂ ಮುನ್ನವೇ ಪರೀಕ್ಷೆ ಬರೆದು ಕುಳಿತಿದ್ದನ್ನ ಕಂಡು ಸಚಿವರೇ ಸಂತಸಗೊಂಡರು.