ಬೆಂಗಳೂರು: ಹೊಸ ಗುಡ್ಡದಹಳ್ಳಿಯ ಹಳೆ ಚರ್ಚ್ ಬಳಿ ಇರುವ ರೇಖಾ ಕೆಮಿಕಲ್ಸ್ ಫ್ಯಾಕ್ಟರಿಗೆ ಇಂದು ಬೆಳಗ್ಗೆ 10-30 ಕ್ಕೆ ಬೆಂಕಿ ಹತ್ತಿಕೊಂಡಿತ್ತು. ಪರಿಣಾಮ ಅದೆಷ್ಟೋ ಜೀವಗಳು ಪ್ರಾಣಬಿಡಬೇಕಿತ್ತು.ಆದ್ರೆ, ಸಿಬ್ಬಂದಿ ಕಾರ್ಯಕ್ಷಮತೆಗೆ ಆಗಬೇಕಿದ್ದ ಅನಾಹುತ ತಪ್ಪಿದೆ.
ಅದ್ಯಾವ ಪರಿ ಬೆಂಕಿ ತನ್ನ ಕೆನ್ನಾಲಿಗೆ ಚಾಚಿತ್ತು ಎಂದರೆ, ಸ್ವಲ್ಪ ಸಮಯದವರೆಗೆ ಅಗ್ನಿ ಶಾಮಕ ಸಿಬ್ಬಂದಿಯೇ ತನ್ನ ಕಾರ್ಯಾಚರಣೆ ನಿಲ್ಲಿಸಿ ತಲೆ ಕೆಡಿಸಿಕೊಂಡಿದ್ದರು. ಎಂಬತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಗಳು 20-21 ಅಗ್ನಿಶಾಮಕ ವಾಹನದಿಂದ ನೀರನ್ನು ಫೈರ್ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.
ಇಕ್ಕಟ್ಟಿನ ಜಾಗಗಳಾದ ಕಾರಣ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಕೆನ್ನಾಲಿಗೆ ಹರಡಿ ಭಸ್ಮಗೊಳಿಸಿತ್ತು. ಸ್ಯಾನಿಟೈಸರ್, ಕೆಮಿಕಲ್, ಆಲ್ಕೋಹಾಲ್ ಕಂಟೆಂಟ್ ಆಗಿರುವ ಕಾರಣ ನೀರು ಚಿಮುಕಿಸಿದಷ್ಟು ಹತ್ತಿ ಉರಿಯತೊಡಗಿತ್ತು. ಹೀಗಾಗಿ ಸ್ವಲ್ಪ ಸಮಯ ಕಾರ್ಯಾಚರಣೆಯನ್ನೇ ನಿಲ್ಲಿಸಬೇಕಾಯ್ತು.
ಕೆಮಿಕಲ್ ಡ್ರಮ್ಮುಗಳು ಸಿಡಿಯುವ ಭೀತಿ ಹಿನ್ನೆಲೆ ಪೊಲೀಸರು ಅಕ್ಕಪಕ್ಕದ ಮನೆಯವರನ್ನ ಖಾಲಿ ಮಾಡಿಸಿದ್ರು. ನಂತರ ಫೈರ್ ಕಂಟ್ರೋಲ್ ಕೆಮಿಕಲ್ ಬಳಸಿ ನೀರು ಹಾಯಿಸಿದಾಗ ಆದಷ್ಟು ಬೆಂಕಿ ಕಂಟ್ರೋಲ್ ಗೆ ಬಂದಿತ್ತು. ಸತತ ಆರು ಗಂಟೆಗಳವರೆಗೂ ನಡೆದ ಕಾರ್ಯಾಚರಣೆಯಲ್ಲಿ ಮೂರು ಜನ ಫೈರ್ ಸಿಬ್ಬಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಒಳಗಿದ್ದ ನಾಲ್ವರು ಕಾರ್ಮಿಕರು ಬೆಂಕಿ ತಗುಲಿದ ಬಳಿಕ ಹೊರ ಬಂದಿದ್ದಾರೆ.
ಸಿಗರೇಟ್ ಸೇದಿ ಬಿಸಾಡಿದ್ದರಿಂದ ಈ ಬೆಂಕಿ ತಗುಲಿದೆ ಎಂಬ ಅನುಮಾನಗಳು ವ್ಯಕ್ತವಾಗ್ತಿದೆ. ಎಫ್ ಎಸ್ ಎಲ್ ಅಧಿಕಾರಿಗಳು ಯಾವ ರೀತಿಯಲ್ಲಿ ನಿಖರ ಕಾರಣ ಹುಡುಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.