ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದ ಕಚೇರಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುಖ್ಯ ಅಭಿಯಂತರ ಶಿವಕುಮಾರ್ ಇಂದು (ಬುಧವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುರುವಾರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.
ಶೇಷಾದ್ರಿಪುರ ಅಪೋಲೊ ಆಸ್ಪತ್ರೆ ಮುಖ್ಯಸ್ಥ ಡಾ.ಉದಯ್ ಮಾತನಾಡಿ, "ಬಿಬಿಎಂಪಿ ಎಂಜಿನಿಯರ್ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟರು. ವಾರದ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ 7 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ದೇಹದ ಉಸಿರಾಟ ನಡೆಸುವ ಭಾಗಗಳಿಗೆ ಸಾಕಷ್ಟು ಹಾನಿಯಾಗಿತ್ತು. ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಆದರೆ, ಪ್ರಯತ್ನ ಫಲ ನೀಡಲಿಲ್ಲ" ಎಂದರು.
"ಶಿವಕುಮಾರ್ ಅವರ ಮೃತ ದೇಹವನ್ನು ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಈಗಾಗಲೇ ಕೊಂಡೊಯ್ಯಲಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ ಮೃತ ದೇಹದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅವರ ಹುಟ್ಟೂರಾದ ನಂಜನಗೂಡಿನ ಚಂದ್ರವಾಡಿ ಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿವೆ" ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೇರಿ ಇತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. "ಪಾಲಿಕೆಯ ಹಲವು ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಶಿವಕುಮಾರ್ ಕಿರಿಯ ವಯಸ್ಸಿನಲ್ಲೇ ವಿಧಿವಶರಾಗಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬ ಸದಸ್ಯರು ಹಾಗೂ ಬಂಧು-ಮಿತ್ರರಿಗೆ ಕರುಣಿಸಲಿ" ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ: ತಾಂತ್ರಿಕ ವಿಚಾರಣೆಗೆ ಆದೇಶ
ಅಂದು ನಡೆದಿದ್ದೇನು?: ಪಾಲಿಕೆಯ ರಸ್ತೆ ಡಾಂಬರು ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆನ್ಜೆಮಿನ್ ಎಂಬ ಕೆಮಿಕಲ್ ಅನ್ನು ಬಿಟುಮಿನ್ ಟೆಸ್ಟ್‌ಗೆ ಬಳಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮ ಮೇಲ್ಭಾಗದಲ್ಲಿದ್ದ ಕಚೇರಿಗೂ ಬೆಂಕಿ ಆವರಿಸಿತ್ತು. ಘಟನೆಯಲ್ಲಿ ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಕಿರಣ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್ ಸೇರಿದಂತೆ ಒಟ್ಟು 7 ಜನ ಸಿಬ್ಬಂದಿ ಗಾಯಗೊಂಡಿದ್ದರು.
8 ಮಂದಿಗೆ ಸೈಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ವಿಕ್ಟೋರಿಯಾಗೆ ಕಳುಹಿಸಲಾಗಿತ್ತು. ಆದರೆ, ಹೆಚ್ಚು ಗಾಯಗೊಂಡಿದ್ದರಿಂದ ಮುಖ್ಯ ಅಭಿಯಂತರ ಶಿವಕುಮಾರ್ ಅವರನ್ನು ಅಂದು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ಅವಶ್ಯವಾಗಿದ್ದರಿಂದ ವಾರದ ಹಿಂದಷ್ಟೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟರು.
ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಇಂಜಿನಿಯರ್ ಆರೋಗ್ಯ ಸ್ಥಿತಿ ಚಿಂತಾಜನಕ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ
ಮುಖ್ಯ ಅಭಿಯಂತರ ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೋಮವಾರ ಭೇಟಿ ನೀಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ''ಅಗ್ನಿ ಅನಾಹುತದಿಂದ ಗಾಯಗೊಂಡಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಶಿವಕುಮಾರ್ ಆರೋಗ್ಯ ಸ್ಥಿತಿಗತಿ ಚಿಂತಾಜನಕವಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ'' ಎಂದಿದ್ದರು.