ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ಹಾಗೂ ವಿಷ್ಣು ಭಟ್ ಅವರನ್ನು ಹಲ್ಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಇದೀಗ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಭಟ್ ಎಂದು ತಿಳಿದು ಬಂದಿದೆ. ಮೆಡಿಕಲ್ ಚೆಕಪ್ನಲ್ಲಿ ಇಬ್ಬರೂ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಶ್ರೀಕಿ ಮತ್ತು ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದರು.
ತಾರಾ ಹೋಟೆಲ್ನಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ತಂಗಿದ್ದ. ಇಲ್ಲಿ ಸ್ನೇಹಿತ ವಿಷ್ಣು ಭಟ್ ಕುಡಿದು ಹೋಟೆಲ್ ಸಿಬ್ಬಂದಿ ಜತೆ ಜಗಳವಾಡಿಕೊಂಡಿದ್ದಾನೆ. ಅಲ್ಲದೇ, ಹಲ್ಲೆಗೂ ಯತ್ನಿಸಿದ್ದಾನೆ. ಆರೋಪಿ ಶ್ರೀಕಿಯೂ ಕೂಡ ಹಲ್ಲೆ ನಡೆಸಲು ಮುಂದಾಗಿದ್ದ. ಈ ಬಗ್ಗೆ ಹೋಟೆಲ್ ಸಿಬ್ಬಂದಿ ಜೀವನ್ ಭಿಮಾನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ಸ್ ಕೇಸ್ನಲ್ಲಿಯೂ ಬಂಧಿಸಿದ್ದರು. ವಿಚಾರಣೆ ವೇಳೆ ಆತ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಅನ್ನು ಕೂಡ ಹ್ಯಾಕ್ ಮಾಡಿದ ಬಗ್ಗೆ ತಿಳಿಸಿದ್ದಾನೆ. ಈ ಪ್ರಕರಣ ಸಂಬಂಧ ಸಿಸಿಬಿ, ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಈತ ಅಂತಾರಾಷ್ಟ್ರೀಯ ವೆಬ್ಸೈಟ್, ಪೋಕರ್ ಗೇಮ್ ಹಾಗೂ ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಒಟ್ಟು ಶ್ರೀಕಿ ಬಳಿ ಇದ್ದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: 'ಬಿಟ್ ಕಾಯಿನ್' ಕಿಂಗ್‌ಪಿನ್ ಶ್ರೀಕಿ ಪೊಲೀಸ್ ವಶ, ಪ್ರಕರಣಕ್ಕೆ ತಿರುವು