ಬೆಂಗಳೂರು: ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಕಾರ್ಪೊರೇಟರ್ ವಿರುದ್ಧ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವಲ್ ಬೈರಸಂದ್ರ ವಾರ್ಡ್ ಜೆಡಿಎಸ್ ಸದಸ್ಯೆಯಾಗಿದ್ದ ನೇತ್ರಾ ನಾರಾಯಣ್ ವಿರುದ್ಧ ಮಾವ ಜಯರಾಮಯ್ಯ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.
ಆಸ್ತಿ ವರ್ಗಾವಣೆ ವಿಚಾರಕ್ಕಾಗಿ ಹಲವು ತಿಂಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆಸ್ತಿ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ. ಬಾಡಿಗೆ ಹಣ ನೀಡದಿದ್ದರೆ ನಿಮ್ಮ ಮಕ್ಕಳ ಮೇಲೆ ಸುಳ್ಳು ದೂರು ದಾಖಲಿಸುವುದಾಗಿ ಬೆದರಿಸಿದ್ದಾರೆ. ಆಸ್ತಿ ನೀಡದಿದ್ದರೆ ನನಗೆ ಹಾಗೂ ನನ್ನ ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ ಮಾಜಿ ಕಾರ್ಪೊರೇಟರ್ ಜತೆ ಡ್ರೈವರ್ ಸೋಮ ಹಾಗೂ ಆತನ ಸಹಚರ ವಿನಯ್ ಮಧ್ಯರಾತ್ರಿ ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಾಗಿ ಆರೋಪಿಸಿದ್ದಾರೆ. ದೂರು ಸಂಬಂಧ ಡಿಜೆಹಳ್ಳಿ ಠಾಣೆಯಲ್ಲಿ ಜೂನ್ 20ರಂದು ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್ಸಿಆರ್) ದಾಖಲಾಗಿತ್ತು. ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.