ಬೆಂಗಳೂರು: ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರಿಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನವೆಂಬರ್ 1 ರಂದು ಮಿಂಟೋ ಆಸ್ಪತ್ರೆಗೆ ನುಗ್ಗಿದ 30-35 ಕಾರ್ಯಕರ್ತರು, ಕರ್ತವ್ಯನಿರತ ವೈದ್ಯರಿಗೆ ಅಡಚಣೆ ಉಂಟು ಮಾಡಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಕರವೇ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಿಂಟೋ ವೈದ್ಯ ಸತೀಶ್ ಅವರು ದೂರು ನೀಡಿದ್ದಾರೆ. ವೈದ್ಯರ ದೂರಿನ ಆಧಾರದ ಮೇಲೆ ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಎಫ್ಐಆರ್ ದಾಖಲು ಹಿನ್ನಲೆ ಕಾನೂನು ರೀತಿಯ ಕ್ರಮ ಜರುಗಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಮಿಂಟೋ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ದೃಷ್ಟಿ ಕಳೆದುಕೊಂಡ 15 ಮಂದಿ ಸಂತ್ರಸ್ತರು ಪರಿಹಾರಕ್ಕಾಗಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವೈದ್ಯರೊಬ್ಬರು ಇಂಗ್ಲಿಷ್ನಲ್ಲಿ ಮಾತಾಡಿದ್ದರು ಎನ್ನಲಾಗ್ತಿದೆ. ಈ ವೇಳೆ ಮಧ್ಯೆಪ್ರವೇಶಿಸಿದ್ದ ಕರವೇ ಕಾರ್ಯಕರ್ತರು ಕನ್ನಡದಲ್ಲೇ ಮಾತಾಡಬೇಕೆಂದು ತಾಕೀತು ಮಾಡಿ, ಹಲ್ಲೆ ನಡೆಸಿರುವ ಆರೋಪ ಕರವೇ ಕಾರ್ಯಕರ್ತರ ಮೇಲಿದೆ.