ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾರ್ಚ್ 16 ರಂದು ರಾಜ್ಯಾದ್ಯಂತ ನಡೆಸಿದ್ದ ದಾಳಿಗೆ ಸಂಬಂಧಿಸಿದಂತೆ ನಗರದ ಮೂವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ರಾಜ್ಯದ ವಿವಿಧೆಡೆ 18 ಭ್ರಷ್ಟ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ರಾಜಧಾನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ. ಕೆ ಶಿವಕುಮಾರ್, ಸಾರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್ ಜ್ಞಾನೇಂದ್ರ ಕುಮಾರ್, ಬಿಡಿಎ ನಗರ ಯೋಜನೆಯ ಉಪ ನಿರ್ದೇಶಕ ರಾಕೇಶ್ ಕುಮಾರ್ ಸೇರಿದಂತೆ ಹಲವು ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ರೇಡ್ ನಡೆಸಲಾಗಿತ್ತು ಎಂದು ಎಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿಯ ವೇಳೆ ಆದಾಯಕ್ಕೂ ಮೀರಿದ ಆಸ್ತಿ, ಹಣ, ಚಿನ್ನಾಭರಣಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಆದಾಯ ಮೂಲಗಳ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.