ಬೆಂಗಳೂರು: ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದಡಿ ನೈರುತ್ಯ ರೈಲ್ವೆ ವಲಯ ಕಾರ್ಯನಿರ್ವಾಹಕ ಇಂಜಿನಿಯರ್ ಘನಶ್ಯಾಮ್ ಪ್ರದಾನ್ ವಿರುದ್ಧ ಸಿಬಿಐ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಘನಶ್ಯಾಮ್ ಪ್ರದಾನ್ 1988ರಲ್ಲಿ ಆಗ್ನೇಯ ರೈಲ್ವೆ ವಿಭಾಗದಲ್ಲಿ ಕಾಮಗಾರಿ ನಿರೀಕ್ಷಕರಾಗಿ ನೇಮಕವಾಗಿದ್ದು, ಬಡ್ತಿ ಪಡೆದು ವಿವಿಧ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನೈರುತ್ಯ ವಲಯ ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಸೇವೆಯಲ್ಲಿದ್ದಾರೆ.
2010 ರಿಂದ 2019ರವರೆಗೆ ಮೈಸೂರು, ಹಾಸನ, ದಾವಣಗೆರೆ ಮತ್ತು ಹಾವೇರಿಯಲ್ಲಿ ನಡೆದ ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆ ಕಂಪನಿ ಜತೆ ಶಾಮೀಲಾಗಿ ಅಕ್ರಮ ಎಸಗಿರುವ ಆರೋಪವಿದೆ. ಗುತ್ತಿಗೆ ಕಂಪೆನಿ ಜತೆ ಹೊಂದಾಣಿಕೆ ಮಾಡಿಕೊಂಡು ಲಂಚ ಪಡೆದಿದ್ದಾರೆ. ಈ ಅವಧಿಯಲ್ಲಿ ಘನಶ್ಯಾಮ್ ಮತ್ತು ಆತನ ಕುಟುಂಬಸ್ಥರ ಹೆಸರಿನಲ್ಲಿ 2.25 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದನೆಯಾಗಿದೆ. ಅದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ತಿಳಿದು ಬಂದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಸಿಬಿಐ ತನಿಖೆ ಕೈಗೊಂಡಿದೆ.