ಬೆಂಗಳೂರು: ಅವಧಿ ಮೀರಿದ ಇಂಜೆಕ್ಷನ್ ನೀಡಿ 2 ವರ್ಷದ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗುವಂತೆ ಮಾಡಿದ್ದ ಆರೋಪದಡಿ ಬೆಂಗಳೂರಿನ ಸಂಜೀವಿನಿ ಆಸ್ಪತ್ರೆ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜ್ವರದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ಯಾದ್ವಿಯನ್ನು ಅಕ್ಟೋಬರ್ 29 ರಂದು ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಡ್ರಿಪ್ಸ್ ಮೂಲಕ ಇಂಜೆಕ್ಷನ್ ನೀಡಿದ್ದು, ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ.
ತುಟಿಯ ಭಾಗದಲ್ಲಿ ರಕ್ತ ಕಾಣಿಸಿಕೊಂಡಿದೆ ಇದರಿಂದ ಆತಂಕಗೊಂಡ ಪೋಷಕರು ತಕ್ಷಣ ಬೇರೆ ಆಸ್ಪತ್ರೆಗೆ ಮಗುವನ್ನು ಸ್ಥಳಾಂತರಿಸಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಣದ ಆಮಿಷವೊಡ್ಡಿರುವ ಆರೋಪವೂ ಕೇಳಿಬಂದಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಗುವಿನ ತಂದೆ ಕಿರಣ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಎಫ್ಐಆರ್ ದಾಖಲಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಸಂಜೀವಿನಿ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಸಹನಾ ''ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ಕೊಟ್ಟಿರುವುದು ನಿಜ. ಡ್ರಿಪ್ಸ್ನಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಅದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಕೆಲಸದಿಂದ ಅಮಾನುತುಗೊಳಿಸಲಾಗಿದೆ" ಎಂದು ಹೇಳಿದ್ದರು.
ಇದನ್ನೂ ಓದಿ: ತಂದೆಗೆ ಚಿಕಿತ್ಸೆ ಕೊಡಿಸಲು ಬಂದು ಸಾವಿನ ಮನೆ ಸೇರಿದ ಮಗಳು: ಇಂಜೆಕ್ಷನ್ ಪಡೆದ ಮಹಿಳೆ ಕ್ಷಣಾರ್ಧದಲ್ಲೇ ಸಾವು ಆರೋಪ
ಹಿಂದಿನ ಪ್ರಕರಣ: ಕಾರವಾರದಲ್ಲಿ ಬೆನ್ನು ನೋವೆಂದು ಆಸ್ಪತ್ರೆಯಲ್ಲಿ ಇಂಜೆಕ್ಷನ್ ತೆಗೆದುಕೊಂಡಿದ್ದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಳೆದ ಜೂನ್ನಲ್ಲಿ ನಡೆದಿತ್ತು. ಪಾರ್ಶ್ವವಾಯು ಪೀಡಿತ ತಂದೆಯ ಆರೋಗ್ಯ ವಿಚಾರಿಸಲೆಂದು ಮಹಿಳೆ ಮುಂದಾಗಿದ್ದಳು. ಈ ವೇಳೆ ತನಗಾಗುತ್ತಿರುವ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವೇಳೆ ಪ್ಯಾರಲಿಸಿಸ್ ಬರದಂತೆ ತಡೆಯುವ ಹಾಗೂ ಮುಂಜಾಗ್ರತೆಯಾಗಿ ಇಂಜೆಕ್ಷನ್ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು. ವೈದ್ಯರ ಸೂಚನೆ ಮೇರೆಗೆ ಮಹಿಳೆ ಇಂಜೆಕ್ಷನ್ ಪಡೆದ ಒಂದೇ ನಿಮಿಷದಲ್ಲಿ ಕೂಗಿ ಕುಸಿದು ಬಿದ್ದಿದ್ದಳು.
ತಕ್ಷಣ ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ, ಕುಸಿದು ಬಿದ್ದ ವೇಳೆಯಲ್ಲಿಯೇ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದ್ದು, ಆಕೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಿದ್ದರು. ಈ ಕುರಿತು ಮೃತ ಮಹಿಳೆಯ ತಂದೆ, ಬೆನ್ನು ನೋವು ಎಂದು ಮಗಳು ವೈದ್ಯರ ಬಳಿ ತೋರಿಸಿದಾಗ ವೈದ್ಯರು ಪ್ಯಾರಾಲಿಸಿಸ್ ಬರದಂತೆ ಮುಂಚೆಯೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ನನ್ನ ಮಗಳು ಇಂಜೆಕ್ಷನ್ ಕೊಡುತ್ತಿದ್ದಂತೆ ಪಪ್ಪಾ ಎಂದು ಹೇಳಿ ಕುಸಿದು ಬಿದ್ದಿದ್ದರು. ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದಿದ್ದರು.