ಬೆಂಗಳೂರು: ಪ್ಯಾಲೆಸ್ಟೈನ್‌ಗೆ ಬೆಂಬಲ ಸೂಚಿಸಿ ನಗರದಲ್ಲಿ ಮೌನ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೈಂಟ್ ಮಾರ್ಕ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುತ್ತಿರುವ ಆರೋಪದಡಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದಲ್ಲಿ ಪ್ಯಾಲೆಸ್ಟೈನ್‌ಗೆ ಬೆಂಬಲ ಸೂಚಿಸಿ ಭಾನುವಾರ ನಗರದ ಸೈಂಟ್ ಮಾರ್ಕ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಪ್ರತಿಭಟನಾಕಾರರು ಒಗ್ಗೂಡಿದ್ದರು. ಕಲ್ಲಂಗಡಿ ಹಣ್ಣನ್ನು ತಮ್ಮ ಸಂಕೇತವನ್ನಾಗಿಟ್ಟುಕೊಂಡು ಪ್ಯಾಲೆಸ್ಟೈನ್ ಪರ ಭಿತ್ತಿಪತ್ರಗಳು ಮತ್ತು ಫಲಕಗಳೊಂದಿಗೆ ಮೌನ ಪಾದಯಾತ್ರೆ ನಡೆಸುತ್ತಿದ್ದರು.
ಸ್ಥಳಕ್ಕೆ ತೆರಳಿದ್ದ ಪೊಲೀಸರು ಅನುಮತಿ ಪಡೆದುಕೊಳ್ಳದೇ ಪ್ರತಿಭಟನೆ ನಡೆಸದಂತೆ ಸೂಚಿಸಿದ್ದರು. ಆದರೂ ಸಹ ಪ್ರತಿಭಟನೆ ಕೈಬಿಡದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 149 (ಕಾನೂನು ಬಾಹಿರವಾಗಿ ಒಗ್ಗೂಡುವಿಕೆ), 188 (ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದಿರುವುದು), 283 (ಪಾದಚಾರಿ ಮಾರ್ಗಕ್ಕೆ ಅಡ್ಡಪಡಿಸುವುದು), ಮತ್ತು 290 (ಸಾರ್ವಜನಿಕರಿಗೆ ತೊಂದರೆ) ತಂದ ಆರೋಪದಡಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೂ ಸಹ ಪ್ಯಾಲೆಸ್ಟೈನ್‌ಗೆ ಬೆಂಬಲಿಸಿ ನಗರದಲ್ಲಿ ನೂರಾರು ಜನರು ದಿಢೀರ್ ಪ್ರತಿಭಟನೆ ನಡೆಸಿದ್ದರು. ನಗರದ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಸೇರಿದ್ದ ನೂರಾರು ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ, ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಪ್ಯಾಲೆಸ್ಟೈನ್‌ಗೆ ಬೆಂಬಲ ನೀಡುವಂತೆ ಆಗ್ರಹಿಸಿದ್ದರು. ಪ್ಯಾಲೆಸ್ಟೈನ್ನ ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಸಹ ಅವರು ಒತ್ತಾಯಿಸಿದ್ದರು.
ನಗರದಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಆದರೂ ಸಹ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದರು. ಕೆಲವರನ್ನು ಕಬ್ಬನ್ ಪಾರ್ಕ್ ಮತ್ತು ಅಶೋಕ ನಗರದ ಪೊಲೀಸರು ವಶಕ್ಕೆ ಪಡೆದಿದ್ದರು.
ಇನ್ನು ಅನುಮತಿ ಪಡೆಯದೇ ಪ್ರತಿಭಟನೆಗೆ ಕರೆ ನೀಡಿದ್ದ 11 ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಪ್ರತಿಭಟನೆ ಮಾಡುವುದಿದ್ದರೆ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸಬಹುದು. ಆದರೆ, ಪೂರ್ವಾನುಮತಿ ಪಡೆಯದೇ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಾನೂನು ಉಲ್ಲಂಘನೆ ಕಂಡುಬಂದಿದ್ದರಿಂದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿತ್ತು.