ಬೆಂಗಳೂರು: ಕಾರ್ ಪೂಲಿಂಗ್‌ಗೆ ಸಂಸದರ ಬೆಂಬಲ ವಿರೋಧಿಸಿ ಪೋಸ್ಟರ್ ಅಂಟಿಸುತ್ತಿದ್ದ ಆಟೋ ಚಾಲಕನನ್ನು ತಡೆದು ಬೆದರಿಕೆ ಹಾಕಿರುವ ಆರೋಪದಡಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಟೋ ಚಾಲಕ ಮನೋಜ್ ಕುಮಾರ್ ಎಂಬುವವರು ನೀಡಿರುವ ದೂರಿನನ್ವಯ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಸಾರಾಂಶ: ದೂರುದಾರ ಮನೋಜ್ ಕುಮಾರ್ ನವೆಂಬರ್ 17ರಂದು ಶಂಕರ್ ನಾಗ್ ಸರ್ಕಲ್ ಬಳಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಅಡ್ಡಿಪಡಿಸಿದ್ದ ಸಂಗಾತಿ ವೆಂಕಟೇಶ್ ಮತ್ತವರ ಕಡೆಯವರು ತಡೆದಿದ್ದಾರೆ. ಈ ವೇಳೆ ಮನೋಜ್ ಕುಮಾರ್ ಹಾಗೂ ಇತರ ಕೆಲ ಚಾಲಕರು ತಮ್ಮ ಆಟೋ ಹಿಂದೆ ಹಾಕಲಾಗಿದ್ದ ''ಕಾರ್ ಪೂಲಿಂಗ್ ವ್ಯವಸ್ಥೆಗೆ ಬೆಂಬಲ ನೀಡಿರುವ ತೇಜಸ್ವಿ ಸೂರ್ಯಗೆ ಧಿಕ್ಕಾರ'' ಎಂಬ ಪೋಸ್ಟರ್ ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ಸಂದರ್ಭದಲ್ಲಿ 'ಮತ್ತೊಮ್ಮೆ ಏರಿಯಾಗೆ ಬಂದರೆ ಕತ್ತರಿಸಿಬಿಡುವುದಾಗಿ' ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಮೇರೆಗೆ ಆಟೋ ಚಾಲಕನ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಸಂಗಾತಿ ವೆಂಕಟೇಶ್ ಮತ್ತವರ ಬೆಂಬಲಿಗರ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಕಾರ್ ಪೂಲಿಂಗ್?: ಪ್ರತಿನಿತ್ಯ ತಮ್ಮ ಕೆಲಸಗಳಿಗೆ ತೆರಳುವವರು ಒಂದೊಂದು ಕಾರಿನಲ್ಲಿ ತೆರಳುವ ಬದಲು ಅದೇ ಮಾರ್ಗದಲ್ಲಿ ತೆರಳುವವರನ್ನ ಜೊತೆಗೆ ಕರೆದೊಯ್ಯಬಹುದು. ಇದೇ ರೀತಿ ಹೊಂದಾಣಿಕೆಯಲ್ಲಿ ನಿತ್ಯ ಒಬ್ಬೊಬ್ಬರು ತಮ್ಮ ಕಾರುಗಳನ್ನು ಬಳಸಿಕೊಳ್ಳಬಹುದು. ಇದರಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಈಗಾಗಲೇ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಐಟಿ ಉದ್ಯೋಗ ವಲಯದಲ್ಲಿ ಕಾರ್ ಪೂಲಿಂಗ್ ಹೆಚ್ಚು ಜನಪ್ರಿಯತೆಗಳಿಸುತ್ತಿದೆ. ಈ ವ್ಯವಸ್ಥೆಯನ್ನು ನಿಷೇಧಿಸದಂತೆ ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಸಂಸದರ ಬೆಂಬಲವನ್ನು ವಿರೋಧಿಸಿದ್ದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು.
ಇದನ್ನೂ ಓದಿ: ತಿನಿಸು ಕಟ್ಟೆಗೆ ಪಿಡಬ್ಲುಡಿ ಅಧಿಕಾರಿಗಳ ದಿಢೀರ್ ಭೇಟಿ, ಪರಿಶೀಲನೆ: ಕಾಂಗ್ರೆಸ್-ಬಿಜೆಪಿ ಮಧ್ಯ ವಾಗ್ವಾದ